ಮಂಗಳೂರು: ಪಣಂಬೂರು ಬೀಚ್ ನಲ್ಲಿ ಅನ್ಯಕೋಮಿನ ಜೋಡಿ ಮೇಲೆ ನೈತಿಕ ಪೊಲೀಸ್ ಗಿರಿ - ನಾಲ್ವರ ವಶಕ್ಕೆ
Monday, February 5, 2024
ಮಂಗಳೂರು: ನಗರದ ಪಣಂಬೂರು ಬೀಚ್ ನಲ್ಲಿ ಅನ್ಯಕೋಮಿನ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪ್ರಶಾಂತ್ ಭಂಡಾರಿ(38), ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ ಉಮೇಶ್ ಪಿ. (23), ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮ ನಿವಾಸಿ ಸುಧೀರ್(26), ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಕೀರ್ತನ್ ಪೂಜಾರಿ(20) ಆರೋಪಿಗಳು.
ಬಂಟ್ವಾಳ ಮೂಲದ ಮುಸ್ಲಿಂ ಯುವಕ ಹಾಗೂ ಬೆಂಗಳೂರಿನ ಹಿಂದೂ ಯುವತಿ ಇಬ್ಬರೂ ಜೊತೆಯಾಗಿ ಪಣಂಬೂರು ಬೀಚ್ ಗೆ ಬಂದಿದ್ದರು. ಈ ವೇಳೆ ಯುವಕ ಹಾಗೂ ಯುವತಿಯನ್ನು ತಡೆದು ಹಿಂದೂ ಸಂಘಟನೆಯ ಕಾರ್ಯಕರ್ತರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪಣಂಬೂರು ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇವರು ಪ್ರಸಾದ್ ಅತ್ತಾವರ ನೇತೃತ್ವದ ರಾಮ್ ಸೇನಾ ಕರ್ನಾಟಕದ ಕಾರ್ಯಕರ್ತರು ಎನ್ನಲಾಗಿದೆ. ಘಟನೆಯ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ಜಾಮೀನಿನ ಮೇಲೆ ಬಿಡಲಾಗಿದೆ.