ಹೃದಯಾಘಾತಕ್ಕೆ ಕರ್ನಾಟಕದ ಉದಯೋನ್ಮುಖ ಕ್ರಿಕೆಟಿಗ ಬಲಿ
Saturday, February 24, 2024
ಬೆಂಗಳೂರು: ಇತ್ತೀಚೆಗೆ ಯುವಕರನ್ನು ಹೃದಯ ಸಂಬಂಧಿ ಕಾಯಿಲೆಗಳು ಅಧಿಕವಾಗಿ ಬಾಧಿಸುತ್ತಿದೆ. ಇದೀಗ ಉದಯೋನ್ಮುಖ ಕ್ರಿಕೆಟಿಗರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಘಟನೆ ಫೆಬ್ರವರಿ 22ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಕೆ. ಹೊಯ್ಸಳ (34) ಎಂದು ಗುರುತಿಸಲಾಗಿದ್ದು, ಏಜಿಸ್ ಸೌತ್ ಝೂನ್ ಟೂರ್ನಿಯಲ್ಲಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ.
ಗುರುವಾರ ಏಜಿಸ್ ಸೌತ್ ಝೂನ್ ಟೂರ್ನಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸುವಲ್ಲಿ ಕರ್ನಾಟಕ ತಂಡವು ಯಶಸ್ವಿಯಾಗಿತ್ತು. ಈ ವೇಳೆ ತಂಡದೊಂದಿಗೆ ಸಂಭ್ರಮಾಚರಣೆ ನಡೆಸುತ್ತಿದ್ದ ಹೊಯ್ಸಳ ಅವರಿಗೆ ಮೈದಾನದಲ್ಲೇ ಎದೆ ನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿದ್ದಾರೆ.
ತಕ್ಷಣ ತಂಡದ ಸದಸ್ಯರು ಹಾಗೂ ಮೈದಾನದ ಸಿಬ್ಬಂದಿ ಅವರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ಅವರ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.