ದೇಶದ ಪ್ರಖ್ಯಾತ ನ್ಯಾಯವಾದಿ ಫಾಲಿ ಎಸ್ ನಾರಿಮನ್ ನಿಧನ
Wednesday, February 21, 2024
ನವದೆಹಲಿ: ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯವಾದಿ, ಮಾಜಿ ಸಾಲಿಸಿಟರ್ ಜನರಲ್ ಫಾಲಿ ಎಸ್ ನಾರಿಮನ್ (95) ಅವರು ವಯೋಸಹಜ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ನವದೆಹಲಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನವೆಂಬರ್ 1950 ರಲ್ಲಿ ಬಾಂಬೆ ಹೈಕೋರ್ಟ್ ವಕೀಲರಾಗಿ ವೃತ್ತಿ ಆರಂಭಿಸಿದ್ದ ನಾರಿಮನ್ ಅವರು 1961 ರಲ್ಲಿ ಹಿರಿಯ ವಕೀಲರಾಗಿ ನಿಯೋಜಿತರಾದರು. ಕಳೆದ 70 ವರ್ಷಗಳಿಗೂ ಅಧಿಕ ಕಾಲ ಅವರು ಕಾನೂನು ಪಂಡಿತರಾಗಿ ದೇಶಾದ್ಯಂತ ಹೆಸರು ಮಾಡಿದ್ದಾರೆ. ತಮ್ಮ ಆರಂಭದ ಅವಧಿಯಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಮತ್ತು 1972ರಿಂದ ದೆಹಲಿಯ ಸುಪ್ರೀಂಕೋರ್ಟ್‌ನಲ್ಲಿ ವಕೀಲ ವೃತ್ತಿ ನಡೆಸಿದ್ದರು. ಮುಂಬೈಯಿಂದ 1972ರ ಮೇ ಯಲ್ಲಿ ದೆಹಲಿಗೆ ಸ್ಥಳಾಂತರಗೊಂಡ ಬಳಿಕ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.
ಕಾವೇರಿ ಜಲವಿವಾದದ ಸಂದರ್ಭ ಕರ್ನಾಟಕದ ಪರ ವಾದ ಮಂಡಿಸುತ್ತಿದ್ದ ಫಾಲಿ ನಾರಿಮನ್ ಅವರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಕೃಷ್ಣಾ ಕಾವೇರಿ, ಮಹದಾಯಿ ಸೇರಿದಂತೆ ಅಂತಾರಾಜ್ಯ ನದಿ ನೀರು ಹಂಚಿಕೆಯ ಎಲ್ಲ ವ್ಯಾಜ್ಯಗಳಲ್ಲಿ ರಾಜ್ಯದ ಪರ ವಾದಿಸುತ್ತಿದ್ದ ಇವರಿಗೆ ಅಂತಾರಾಷ್ಟ್ರೀಯ ಜಲತಜ್ಞರೆಂಬ ಖ್ಯಾತಿಯೂ ಇದೆ.
ನಾರಿಮನ್ ಅವರು 1991ರಿಂದ 2010ರ ವರೆಗೆ ಬಾರ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದರು. 1989 ರಿಂದ 2005ರ ವರೆಗೆ ICC (ಇಂಟರ್ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್) ಪ್ಯಾರಿಸ್‌ನ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಉಪಾಧ್ಯಕ್ಷರಾಗಿದ್ದರು ಮತ್ತು ಇಂಟರ್ ನ್ಯಾಷನಲ್ ಕೌನ್ಸಿಲ್ ಫಾರ್ ಕಮರ್ಷಿಯಲ್ ಆರ್ಬಿಟ್ರೇಶನ್ ಮಂಡಳಿಯ ಅಧ್ಯಕ್ಷರಾಗಿದ್ದರು. 1995 ರಿಂದ 1997ರವರೆಗೆ ಜಿನೀವಾದಲ್ಲಿ ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದರು.