ಅಮೇರಿಕಾದಲ್ಲಿ ಮಾರಣಾಂತಿಕ ದಾಳಿಗೊಳಗಾಗಿ ಭಾರತೀಯ ಮೂಲದ ಟೆಕ್ಕಿ ಸಾವು

ವಾಷಿಂಗ್ಟನ್: ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿಸಿಯ ರೆಸ್ಟೋರೆಂಟ್ ಒಂದರ ಹೊರಗಡೆ ಮಾರಣಾಂತಿಕವಾಗಿ ಹಲ್ಲೆಗೀಡಾದ ಭಾರತೀಯ ಮೂಲದ 41 ವರ್ಷದ ಟೆಕ್ಕಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ಅಮೇರಿಕಾದಲ್ಲಿ ಅಲ್ಲಿನ ಪ್ರಜೆಗಳಿಂದ ದಾಳಿಗೊಳಗಾಗಿ ಭಾರತ ಅಥವಾ ಭಾರತೀಯ ಮೂಲದವರು ಮೃತಪಟ್ಟಿರುವ ಏಳನೇ ಪ್ರಕರಣವಾಗಿದೆ.

ವಾಷಿಂಗ್ಟನ್ ಡಿಸಿಯ ವರ್ಜೀನಿಯಾ ಉಪನಗರ ಅಲೆಕ್ಸಾಂಡ್ರಿಯಾ ನಿವಾಸಿ ವಿವೇಕ್‌ ತನೇಜಾ ಮೃತ ಟೆಕ್ಕಿ. ಫೆಬ್ರವರಿ 2ರಂದು ಶ್ವೇತಭವನದಿಂದ 7 ಬ್ಲಾಕ್ ದೂರದಲ್ಲಿರುವ 15ನೇ ಎನ್ ಡಬ್ಲ್ಯು ಬೀದಿಯ 1100ನೇ ಬ್ಲಾಕ್ ನಲ್ಲಿ ಈ ಮಾರಣಾಂತಿಕ ಹಲ್ಲೆ ನಡೆದಿತ್ತು.

ತಡರಾತ್ರಿ 2ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಂತ್ರಸ್ತ ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಗಮನಿಸಿದ್ದಾರೆ. ತೀವ್ರ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿವೇಕ್ ತನೇಜಾ ಅವರನ್ನು ಟ್ರಾಮಾ ಸೆಂಟರ್ ಗೆ ಕರೆದೊಯ್ಯಲಾಗಿತ್ತು. ಆದರೆ ಫೆಬ್ರವರಿ 7ರಂದು ವಿವೇಕ್ ತನೇಜಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ವಿಭಾಗ ಹೇಳಿಕೆ ನೀಡಿದೆ.

ಶಂಕಿತರ ಫೋಟೊ ಬಿಡುಗಡೆ ಮಾಡಲಾಗಿದ್ದು, ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ಡಾಲರ್ ಬಹುಮಾನ ಘೋಷಿಸಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu