ಮಂಗಳೂರು: ಕೆಎಸ್ಆರ್ ಟಿಸಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು


ಮಂಗಳೂರು: ಹೆದ್ದಾರಿ ದಾಟುತ್ತಿದ್ದ ವೇಳೆ ಬೈಕ್ ಗೆ ಹೆದ್ದಾರಿ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಫರಂಗಿಪೇಟೆ ಬಳಿಯ ಅರ್ಕುಳ ಕ್ರಾಸ್‌ ನಲ್ಲಿ ರವಿವಾರ ಬೆಳಗ್ಗೆ ನಡೆದಿದೆ. 

ಅರ್ಕುಳದ ಅಬ್ಬೆಟ್ಟು ನಿವಾಸಿ ಚರಣ್ ರಾಜ್ (34) ಅಪಘಾತದಲ್ಲಿ ಮೃತಪಟ್ಟ ಯುವಕ.

ಚರಣ್ ರಾಜ್ ತಮ್ಮ ಮನೆಯಿಂದ ಬೆಳಗ್ಗೆ ಅಡ್ಯಾರಿಗೆಂದು ಬರುತ್ತಿದ್ದರು. ಅರ್ಕುಳ ಕ್ರಾಸ್ ನಲ್ಲಿ ಹೆದ್ದಾರಿಗೆ ತಿರುವು ಪಡೆಯುತ್ತಿದ್ದಾಗ ಮಂಗಳೂರಿನಿಂದ ಪುತ್ತೂರಿನತ್ತ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಅತಿವೇಗದಿಂದ ಬಂದು ಢಿಕ್ಕಿಯಾಗಿದೆ. ಚಾಲಕನ ಅತಿವೇಗದಿಂದಾಗಿ ಬಸ್ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರಿನ ಮತ್ತೊಂದ ಬದಿಗೆ ಹೋಗಿದೆ. ಅಲ್ಲದೆ ಬೈಕ್ ಕೂಡ ರಸ್ತೆಯ ಮತ್ತೊಂದು ಬದಿಗೆ ಎಸೆದು ಬಿದ್ದಿದೆ. ಸವಾರನೂ ರಸ್ತೆಯ ಇನ್ನೊಂದು ಕಡೆಗೆ ಹೋಗಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅರ್ಕುಳ ಕ್ರಾಸ್ ನಲ್ಲಿ ನಿರಂತರ ಅಪಘಾತ ಆಗುತ್ತಿದ್ದ ಪರಿಣಾಮ ಬ್ಯಾರಿಕೇಡ್ ಹಾಕಲಾಗಿದೆ. ರವಿವಾರ ಆಗಿದ್ದರಿಂದ ಹೆದ್ದಾರಿಯಲ್ಲಿ ವಾಹನ ಕಡಿಮೆ ಇದ್ದ ಪರಿಣಾಮ ಬಸ್ ಅತಿ ವೇಗದಿಂದ ಧಾವಿಸಿ ಬಂದಿತ್ತು. ಇದೇ ವೇಳೆ, ಸವಾರ ಹೆದ್ದಾರಿ ಕ್ರಾಸ್ ಮಾಡಲು ರಸ್ತೆಯ ಮಧ್ಯಕ್ಕೆ ಬಂದಿದ್ದು, ಬಸ್ ‌ ನೇರವಾಗಿ ಬೈಕಿಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅರ್ಧ ಗಂಟೆಗೂ ಅಧಿಕ ಕಾಲ ಹೆದ್ದಾರಿ ತಡೆ ನಡೆದದ್ದರಿಂದ ಎರಡು ಕಡೆಯಲ್ಲೂ ನಾಲ್ಕೈದು ಕಿಮೀ ಉದ್ದಕ್ಕೆ ಬ್ಲಾಕ್ ಆಗಿತ್ತು.

ವಿವಾಹಿತರಾಗಿರುವ ಚರಣ್ ರಾಜ್ ಗೆ ಎರಡೂವರೆ ವರ್ಷದ ಮಗುವಿದೆ.