ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕೇವಲ 2 ಸೀಟುಗಳನ್ನು ಮಾತ್ರ ಗೆದ್ದಿದೆ. ಆದ್ದರಿದ ಲೋಕಸಭೆ ಚುಮಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಲಾಗುವುದಿಲ್ಲ ಎಂದು ಭಾವಿಸಬೇಡಿ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಕರಾವಳಿ, ಮಲೆನಾಡಿನ ಮಹಿಳೆಯರು ಕಾಂಗ್ರೆಸ್ ಕೈ ಬಲಪಡಿಸಲಿದ್ದಾರೆ. ಜನಪರ ಕಾರ್ಯಕ್ರಮಗಳಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಅಡ್ಯಾರ್ ನ ಸಹ್ಯಾದ್ರಿ ಮೈದಾನದಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,
ಪ್ರಧಾನಮಂತ್ರಿಯವರು 370 ಸೀಟು ಗೆಲ್ಲುತ್ತೇವೆಂದು ಹೇಳಬಹುದು. ಆದರೆ ಅದು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ದೇಶ ಒಗ್ಗೂಡಿಸಲು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ದೇಶ ಹೊಸ ನಾಯಕತ್ವ ಬದಲಾವಣೆ ಮಾಡುವ ಚಿಂತನೆಯಲ್ಲಿದೆ. ನಮ್ಮ ರಾಜ್ಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಕೂತಿದ್ದ ಸ್ಥಾನದಲ್ಲಿ ಕುಳಿತು ದೇಶದಲ್ಲಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ರಾಜಕಾರಣದಲ್ಲಿ ಯಾರು ಯಾವುದೇ ನಿರ್ಧಾರ ಮಾಡಿಕೊಳ್ಳಲಿ. ಯಾರೇ ಒಂದಾಗಲಿ, ನಾವು ಚಿಂತೆ ಮಾಡುವುದು ಬೇಡ. ನಮ್ಮ ಸಿದ್ಧಾಂತ, ನಂಬಿಕೆ, ತತ್ವ, ನೀತಿ ಮೇಲೆ ಕೆಲಸ ಮಾಡೋಣ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕಾಂಗ್ರೆಸ್ ಸಿದ್ಧಾಂತ ನಾವು ಉಳಿಸಿಕೊಳ್ಳಬೇಕು ಎಂದು ಡಿಕೆಶಿ ಹೇಳಿದರು.
ಕಾಂಗ್ರೆಸ್ ಯೋಜನೆಗಳ ಫಲಾನುಭವಿಗಳಿಂದ ಮೋದಿ ಜಪ - ಖರ್ಗೆ ಖೇದ
ಉಳುವವನೇ ಭೂಮಿಯ ಒಡೆಯ, ಉಚಿತ ಶಿಕ್ಷಣ, ಸಾಲ ಮೇಳ ಮುಂತಾದ ಕಾಂಗ್ರೆಸ್ ಯೋಜನೆಗಳಿಂದ ಲಾಭ ಪಡೆದವರೇ ಈಗ ಭಗವಾಧ್ವಜ ಹಿಡಿದು ಮೋದಿ ಜಪ ಮಾಡುತ್ತಿದ್ದಾರೆ. ಮೋದಿ ಮೋದಿ ಎಂದರೆ ಹೊಟ್ಟೆ ತುಂಬುತ್ತದೆಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಈಗಿನ ಜನತೆ ಇತಿಹಾಸ ಮರೆತಿದ್ದಾರೆ. ಕಾಂಗ್ರೆಸ್ ನ ಕೆಲಸಗಳನ್ನು ಮರೆತು ಮೋದಿ ಮೋದಿ ಎನ್ನುತ್ತಿದ್ದಾರೆ. ಮೋದಿ ನಿಮಗೆ ಜಮೀನು ಕೊಟ್ನಾ? ಮೋದಿ ಫುಡ್ ಸೆಕ್ಯುರಿಟಿ ಏಕ್ಸ್ ತಂದಿದ್ದಾನ? ಎಲ್ಲರಿಗೂ ಉದ್ಯೋಗ ಕೊಡುತ್ತೇವೆ ಅಂದರು ಆದರೆ ಯಾರಿಗೆ ಉದ್ಯೋಗ ಸಿಕ್ಕಿದೆ ಹೇಳಿ. ಇಷ್ಟಾದರೂ ಮೋದಿ ಮೋದಿ ಘೋಷಣೆ ಕೂಗು, ಇಷ್ಟೊಂದು ಬಿಜೆಪಿ ಬಾವುಟಗಳು ಯಾಕೆ ಅಡ್ಡಾಡುತ್ತಿವೆ ಎಂದು ಪ್ರಶ್ನಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ತೆರಿಗೆ ಹಣ ರಾಜ್ಯಕ್ಕೆ ಬರುತ್ತಿಲ್ಲವೆಂದಾಗ ಸತ್ಯಾಗ್ರಹ ಮಾಡಬೇಕಾಯಿತು. ಕಾಂಗ್ರೆಸ್ ಪಕ್ಷ ನೀಡಿರುವ ಹಿಂದಿನ ಯೋಜನೆಗಳನ್ನು ಜನರು ಮರೆತಿದ್ದಾರೆ. ಕನಿಷ್ಠ ರಾಜ್ಯ ಸರಕಾರ ನೀಡಿರುವ 5 ಗ್ಯಾರಂಟಿಯನ್ನಾದರೂ ನೆನಪಿನಲ್ಲಿಟ್ಟುಕೊಳ್ಳಿ. ಹಿಂದೆ ಮಾಡಿದಂತೆ ಮಾಡಬೇಡಿ ಎಂದು ಜನರಿಗೆ ಮನವಿ ಮಾಡಿದರು.