ಮಂಗಳೂರು: ನಟೋರಿಯಸ್ ರೌಡಿ ಆಕಾಶಭವನ ಶರಣ್ ಗೆ ಆಶ್ರಯ ನೀಡಿದ ಆರೋಪ - ಏಳು ಮಂದಿ ವಿರುದ್ಧ ಪ್ರಕರಣ ದಾಖಲು


ಮಂಗಳೂರು: ಪೊಲೀಸ್ ಗುಂಡೇಟಿನಿಂದ ಕಾಲಿಗೆ ಗಾಯವಾಗಿ ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟೋರಿಯಸ್ ರೌಡಿ ಆಕಾಶಭವನ ಶರಣ್ (37)ಗೆ ಆಶ್ರಯ ನೀಡಿರುವ ಆರೋಪದಲ್ಲಿ ಏಳು ಮಂದಿಯ ವಿರುದ್ಧ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದೆ.

ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿ ಪೊಲೀಸರಿಗೆ ಬೇಕಾಗಿದ್ದ ರೋಹಿದಾಸ್ ಅಲಿಯಾಸ್ ಆಕಾಶಭವನ ಶರಣ್ ಪತ್ತೆಗೆ ಸಿಸಿಬಿ ಪೊಲೀಸರು ಕಳೆದ 20 ದಿನಗಳಿಂದ ಬೆನ್ನು ಬಿದ್ದಿದ್ದರು‌. ಈ ವೇಳೆ ಆತನಿಗೆ ತಲೆಮರೆಸಿಕೊಳ್ಳಲು ಹಲವಾರು ಮಂದಿ ವಿವಿಧ ಕಡೆಗಳಲ್ಲಿ ಸಹಾಯ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಆಶ್ರಯ ನೀಡಿದ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೋಡಿಕಲ್‌ ನಿವಾಸಿ ಶೀಲಾ, ಉಡುಪಿ ಸಂತೆಕಟ್ಟೆ ನಿವಾಸಿ ಶರತ್ ಭಂಡಾರಿ ಹಾಗೂ ಆತನ ಪತ್ನಿ ಮಯೂರಿ ಭಂಡಾರಿ, ಧನಂಜಯ ಹಾಗೂ ಚೇತನ್ ಬುಳ್ಳ ಎಂಬವರ ವಿರುದ್ಧ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಶಿವ ಕರ್ಂಬಿಸ್ಥಾನ ಎಂಬಾತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ, ಶಾನು ಶೆಟ್ಟಿ ಎಂಬಾತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶರಣ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಂಡ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗೆ ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu