ದೇಶದ ಉದ್ದದ ಸಮುದ್ರ ಸೇತುವೆಗೆ ಇಂದು ಮೋದಿ ಚಾಲನೆ
ಥಾಣೆ: ಮುಂಬೈ ಮತ್ತು ನವಿ ಮುಂಬೈ ನಡುವೆ ನಿರ್ಮಾಣ ಮಾಡಲಾಗಿರುವ ಭಾರತದ ಅತಿ ಉದ್ದದ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಇಂದು) ಉದ್ಘಾಟಿಸಲಿದ್ದಾರೆ. ಈ ಸೇತುವೆ ಒಟ್ಟು 21.8 ಕಿ.ಮೀ. ಉದ್ದದ ಸೇತುವೆಯಾಗಿದ್ದು, 17840 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಮಹಾರಾಷ್ಟ್ರ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ಅವರು, ಈ 6 ಪಥದ ಹೆದ್ದಾರಿಯನ್ನು ಸಹ ಉದ್ಘಾಟಿಸಲಿದ್ದಾರೆ. ಇದು ಮುಂಬೈ ಟ್ರಾನ್ಸ್- ಹಾರ್ಬರ್ ಲಿಂಕ್ ಸೇತುವೆಯಾಗಿದ್ದು, ಇದಕ್ಕೆ 'ಅಟಲ್ ಬಿಹಾರಿ ವಾಜಪೇಯಿ ಸೇವಿ - ನವಶೇವಾ ಅಟಲ್ ಸೇತು' ಎಂದು ಹೆಸರಿಡಲಾಗಿದೆ. ಇದು ಮುಂಬೈ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ.
ಸೇತುವೆಯ ವಿಶೇಷತೆ:
ಈ ಸೇತುವೆ ಮುಂಬೈ ಮತ್ತು ಅದರ ಉಪನಗರವಾದ ನವಿ ಮುಂಬೈಗೆ ಸಮುದ್ರದ ಮೇಲ್ಬಾಗದಲ್ಲಿ ಸಂಪರ್ಕ ಕಲ್ಪಿಸಲಿದೆ. ಇದು 6 ಪಥದ ಹೆದ್ದಾರಿಯಾಗಿದ್ದು, ಇದರಿಂದ 2 ಗಂಟೆಯ ಪ್ರಯಾಣದ ಅವಧಿ ಕೇವಲ 20 ನಿಮಿಷಕ್ಕೆ ಇಳಿಯಲಿದೆ. ಅಲ್ಲದೇ ಪುಣೆ, ಗೋವಾ ಸೇರಿದಂತೆ ದಕ್ಷಿಣ ಭಾರತಕ್ಕೆ ಪ್ರಯಾಣಿಸುವವರಿಗೆ ಇದು ಅನುಕೂಲ ಒದಗಿಸಲಿದೆ. 21.8 ಕಿ.ಮೀ. ಉದ್ದದ ಸೇತುವೆಯಲ್ಲಿ 16.5 ಕಿ.ಮೀ. ಸಮುದ್ರದ ಮೇಲೆ ನಿರ್ಮಾಣಗೊಂಡಿದ್ದರೆ, 5.5 ಕಿ.ಮೀ. ಭೂಮಿಯ ಮೇಲೆ ನಿರ್ಮಾಣಗೊಂಡಿದೆ. ಈ ಸೇತುವೆಯ ಮೇಲೆ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶ ನೀಡಲಾಗಿದೆ. ಬೈಕ್ ಮತ್ತು ಆಟೋಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಸಮುದ್ರ ಸೇತುವೆ ಮೇಲೆ ಸಂಚರಿಸಲು ಟೋಲ್ ಕಟ್ಟಬೇಕು. ಒಮ್ಮುಖ ಪ್ರಯಾಣಕ್ಕೆ ವಾಹನಗಳಿಗೆ 250 ರು. ಮತ್ತು ದ್ವಿಮುಖ ಪ್ರಯಾಣಕ್ಕೆ 375 ರು. ಶುಲ್ಕ ಕಟ್ಟಬೇಕು.