MANGALORE-ಮಾಜಿ ಪ್ರೇಯಸಿ ಗಲಾಟೆ ಮಧ್ಯೆಯೇ ಬೇರೊಬ್ಬಳಿಗೆ ತಾಳಿ ಕಟ್ಟಿ ವರ ಪರಾರಿ!



ಮಂಗಳೂರು: ಯುವತಿಯೊಬ್ಬಳ ಜತೆ ವಿವಾಹ ನಡೆಯುತ್ತಿದ್ದಾಗ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡಿದ ಘಟನೆ ಉಳ್ಳಾಲ ತಾಲೂಕಿನ ಕೋಟೆಕಾರ್ ಬೀರಿ ಬಳಿ ನಡೆದಿದೆ. ಇದರಿಂದ ತಾಳಿಕಟ್ಟಿದ ವರ ವಧುವನ್ನು ಬಿಟ್ಟು ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಲು ತೆರಳುತ್ತೇನೆ ಎಂದು ಅಲ್ಲಿಂದ ಪರಾರಿ ಆಗಿದ್ದಾನೆ.

ಶುಕ್ರವಾರ ಬೆಳಗ್ಗೆ ಬೀರಿಯ ಕಲ್ಯಾಣ ಮಂಟಪದಲ್ಲಿ ಕೇರಳದ ಅಕ್ಷಯ್ ಎಂಬುವರ ಮದುವೆ ಮಂಗಳೂರಿನ ಯುವತಿ ಜೊತೆ ನಡೆಯುತ್ತಿತ್ತು. ಈ ವೇಳೆ, ಮೈಸೂರು ಮೂಲದ ಸಂತ್ರಸ್ತ ಯುವತಿ ಪೊಲೀಸರೊಂದಿಗೆ ಮಂಟಪಕ್ಕೆ ಬಂದು ಗಲಾಟೆ ನಡೆಸಿದಳು.

ಒಂದೂವರೆ ವರ್ಷದ ಹಿಂದೆ ಆನ್‌ಲೈನ್‌ನಲ್ಲಿ ಅಕ್ಷಯ್ ಪರಿಚಯವಾಗಿತ್ತು. ಬಳಿಕ, ಆತ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಈಗ ವಂಚಿಸಿದ್ದಾನೆ ಎಂದು ಮೈಸೂರಿನ ಯುವತಿ ಡಿ.26ರಂದು ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಳು.

 ಈ ಹಿನ್ನೆಲೆಯಲ್ಲಿ ಆತ ಅಲ್ಲಿನ ಕೋರ್ಟಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ, ಕೋರ್ಟ್ ಅವನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ನಡುವೆ ಮಂಗಳೂರಿನ ಯುವತಿ ಜೊತೆ ಅಕ್ಷಯ್‌ ಗೆ ವಿವಾಹ ನಿಶ್ಚಯವಾಗಿತ್ತು.

ಈ ವಿಷಯ ತಿಳಿದು ಮಾಜಿ ಪ್ರೇಯಸಿ ಮದುವೆ ಮಂಟಪದ ಬಳಿ ಬಂದು ಗಲಾಟೆ ಆರಂಭಿಸಿದಳು. ಈ ವೇಳೆ, ಅಕ್ಷಯ್ ಕುಟುಂಬಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರೇಯಸಿಯ ವಿರೋಧದ ನಡುವೆಯೂ ಅಕ್ಷಯ್ ವಿವಾಹ ನೆರವೇರಿತು. ಬಳಿಕ, ತನಗೆ ಅನಾರೋಗ್ಯ, ಕಿಡ್ನಿಯಲ್ಲಿ ಕಲ್ಲು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗುವುದಾಗಿ ಹೇಳಿ ಅಲ್ಲಿಂದ ಪರಾರಿಯಾದ.


BREAKING NEWS
Loading latest news...
Join our WhatsApp Channel Powered By : Online Pudu