ಅತಿಯಾದ ಮದ್ಯಪಾನದಿಂದ ಆಸ್ಪತ್ರೆಗೆ ದಾಖಲಾದ ಮ್ಯಾಕ್ಸ್ ವೆಲ್: ತನಿಖೆಗೆ ಮುಂತಾದ ಕ್ರಿಕೆಟ್‌ ಆಸ್ಟ್ರೇಲಿಯಾ


ಮೆಲ್ಬರ್ನ್: ಕಳೆದ ವಾರ ಅಡಿಲೇಡ್‌ನಲ್ಲಿ ಲೇಟ್‌ನೈಟ್ ಪಾರ್ಟಿಯೊಂದರಲ್ಲಿ ಹಾಜರಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ, ಆಲ್ ರಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ಪ್ರಕರಣದ ಕುರಿತು ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮುಂದಾಗಿದೆ.

ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಅವರನ್ನು ಒಳಗೊಂಡ “ಸಿಕ್ಸ್ ಆಂಡ್ ಔಟ್' ಬ್ಯಾಂಡ್‌ನ ಸಂಗೀತಗೋಷ್ಠಿಯಲ್ಲಿಯೂ ಮ್ಯಾಕ್ಸ್‌ವೆಲ್‌ ಹಾಜರಾಗಿದ್ದರು. ಇವರು ಅತಿಯಾದ ಮದ್ಯಪಾನ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಗುಣಮುಖರಾದ ಅವರು ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು ಎನ್ನಲಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಏಕದಿನ ವಿಶ್ವಕಪ್ ಜಯಿಸುವಲ್ಲಿ ಮ್ಯಾಕ್ಸ್‌ವೆಲ್ ಪ್ರಮುಖ ಪಾತ್ರವಹಿಸಿದ್ದರು.

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಅವರು ಆಸೀಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇತ್ತೀಚೆಗೆ ಬಿಗ್ ಬಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಫೈನಲ್ಸ್‌ಗೇರಿಸಲು ವಿಫಲವಾಗಿದ್ದರು‌. ಇದರ ಬೆನ್ನಲ್ಲೇ ಮ್ಯಾಕ್ಸ್‌ವೆಲ್ ಅದರ ನಾಯಕತ್ವ ತ್ಯಜಿಸಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್‌ ಮುಂಬರುವ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡಬೇಕಿದೆ. ಆದರೆ ಪ್ರಕರಣದಲ್ಲಿ ಒಂದು ವೇಳೆ ಮ್ಯಾಕ್ಸ್‌ವೆಲ್‌ಗೆ ಸಿಎ ನಿಷೇಧ ಶಿಕ್ಷೆ ವಿಧಿಸಿದರೆ, ಆರ್‌ಸಿಬಿಗೂ ಅಲಭ್ಯರಾಗುವ ಭೀತಿ ಎದುರಾಗಿದೆ.