ಕಿರಾತಕ ಕ್ರೈಮ್ಯಾಕ್ಸ್ ಮಾದರಿಯಲ್ಲಿ ಪ್ರೇಮಿಗಳಿಬ್ಬರ ವಿವಾಹ - ಬಳಿಕ ನಡೆದದ್ದೇ ಹೈಡ್ರಾಮಾ


ಬಳ್ಳಾರಿ: ನಟ ಯಶ್​ ಅಭಿನಯದ ಸೂಪರ್​ ಹಿಟ್​ ಕಿರಾತಕ ಕ್ಲೈಮ್ಯಾಕ್ಸ್​ ಮಾದರಿಯ ಘಟನೆಯೊಂದು ಬಳ್ಳಾರಿಯಲ್ಲಿ ನಿಜವಾಗಿ ನಡೆದಿದೆ.

ಪ್ರೇಮಿಗಳಿಬ್ಬರು ಕಿರಾತಕ ಸಿನಿಮಾ ಮಾದರಿ ಮದುವೆಯಾಗಿದ್ದಾರೆ. ರಸ್ತೆಯಲ್ಲಿಯೇ ಕಾರು ನಿಲ್ಲಿಸಿ, ಪರಸ್ಪರ ಹಾರ ಬದಲಿಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಬಳ್ಳಾರಿಯ ತೆಕ್ಕಲಕೋಟೆ ಮೂಲದ ಶಿವಪ್ರಸಾದ್ ಹಾಗೂ ಕೊಪ್ಪಳ ಮೂಲದ ಅಮೃತಾ ಮದುವೆಯಾದ ಪ್ರೇಮಿಗಳು. ಆದರೆ, ಇಬ್ಬರ ಪ್ರೇಮ ವಿವಾಹಕ್ಕೆ ಯುವತಿಯ ಪಾಲಕರು ವಿರೋಧ ವ್ಯಕ್ತಪಡಿಸಿದ್ದು, ಈ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ.

ವಿವಾಹದ ಬಳಿಕ ಯುವತಿಯನ್ನು ಬಳ್ಳಾರಿಯ ಶಾಂತಿಧಾಮ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಆಕೆಯನ್ನು ಪೊಲೀಸ್ ವಿಚಾರಣೆ ನಡೆಸಿದಾಗ ಒಂದು ಬಾರಿ ಪೋಷಕರು ಬೇಕೆಂದು, ಮತ್ತೊಂದು ಬಾರಿ ಪ್ರೇಮಿ ಬೇಕೆಂದು ಯುವತಿ ದ್ವಂದ್ವ ಹೇಳಿಕೆ ನೀಡಿದ್ದಾಳೆ. ಪರಿಣಾಮ ಶಾಂತಿಧಾಮದ ಮುಂದೆ ಹೈಡ್ರಾಮಾವೇ ನಡೆದಿದೆ. ಈ ವೇಳೆ ಸಿನಿಮೀಯ ಮಾದರಿಯಲ್ಲಿ ಯುವತಿಯನ್ನು ಎಳೆದೊಯ್ಯಲು ಆಕೆತ ಪಾಲಕರು ಯತ್ನಿಸಿದ್ದಾರೆ. ಹೀಗಾಗಿ ಕೆಲಕಾಲ ಸಾಂತ್ವನ ಕೇಂದ್ರ ಮುಂದೆ ಗೊಂದಲದ ವಾತಾವರಣ ಉಂಟಾಯಿತು. ಶಿವಪ್ರಸಾದ್ ಹಾಗೂ ಅಮೃತಾ ಪಾಲಕರ ನಡುವೆ ಗಲಾಟೆಯು ನಡೆಯಿತು.

ಗಲಾಟೆಯ ನಡುವೆ ಯುವತಿ ತನಗೆ ತನ್ನ ಗಂಡ ಬೇಕು ಅಂತಾ ಕೂಗಾಡಿಳು. ಆದರೆ, ಆಕೆಯನ್ನು ಬಲವಂತವಾಗಿ ಎಳೆದೊಯ್ದು ಕಾರು ಹತ್ತಿಸಲು ಪಾಲಕರು ಯತ್ನಿಸಿದರು. ಆದರೆ, ಶಿವಪ್ರಸಾದ್​, ಕಾರನ್ನು ಅಡ್ಡಗಟ್ಟಿ ತನ್ನ ಪ್ರೇಯಸಿಗಾಗಿ ತುಂಬಾ ಗೊಗರೆದನು. ಪೊಲೀಸರ ಮುಂದೆಯೇ ಈ ಹೈಡ್ರಾಮ ನಡೆಯಿತು.

ಅಮೃತಾ ಕೂಡ ತನ್ನ ಪಾಲಕರೊಂದಿಗೆ ಕಾರು ಹತ್ತಲು ನಿರಾಕರಿಸಿದಳು. ಇತ್ತ ಶಿವಪ್ರಸಾದ್​ ನನಗೆ ಹೆಂಡ್ತಿನೂ ಬೇಕು ಮತ್ತು ರಕ್ಷಣೆನೂ ಬೇಕೆಂದು ಇಡೀ ರಾತ್ರಿ ಸಾಂತ್ವನ ಕೇಂದ್ರ ಮುಂದೆ ಧರಣಿ ಕುಳಿತನು. ಕೊನೆಗೆ ಪಾಲಕರು ಅಮೃತಾಳನ್ನು ಸಾಂತ್ವನ ಕೇಂದ್ರದಲ್ಲಿ ಬಿಟ್ಟು ಹೋದರು. ಹುಡುಗಿ ಮೇಲ್ಜಾತಿ ಮತ್ತು ಹುಡುಗ ಕೆಳ ಜಾತಿ ಎಂಬ ಕಾರಣಕ್ಕೆ ಯುವತಿ ಪಾಲಕರು ಪ್ರೇಮ ವಿವಾಹಕ್ಕೆ ಒಪ್ಪಿಲ್ಲ ಎಂದು ತಿಳಿದುಬಂದಿದೆ.