ಗೃಹಪ್ರವೇಶಕ್ಕೆ ಮೊದಲೇ ಅಡಿಪಾಯ ಸಮೇತ ಮಗುಚಿಬಿದ್ದ ಮೂರು ಅಂತಸ್ತಿನ ಕಟ್ಟಡ - ತಪ್ಪಿದ ಭಾರೀ ಅನಾಹುತ



ಪುದುಚೇರಿ: ನೂತನವಾಗಿ ನಿರ್ಮಾಣಗೊಂಡು ಮೂರು ಅಂತಸ್ತಿನ ಕಟ್ಟಡವೊಂದು ಗೃಹಪ್ರವೇಶಕ್ಕೂ ಮುನ್ನವೇ ಅಡಿಪಾಯ ಸಮೇತ ಕುಸಿದು ಬಿದ್ದ ಆಘಾತಕಾರಿ ಘಟನೆಯೊಂದು ಪುದುಚೇರಿಯ ಅಟ್ಟುಪಟ್ಟಿಯಲ್ಲಿರುವ ಅಂಬೇಡ್ಕ‌ರ್ ನಗರದಲ್ಲಿ ನಡೆದಿದೆ.

ಒಳಚರಂಡಿ ಕಾಲುವೆಯ ನವೀಕರಣಕ್ಕೆಂದು ಮಣ್ಣು ತೆಗೆಯುವ ಯಂತ್ರ ಬಳಸಿ ಹಳ್ಳ ತೋಡಿದ್ದೇ ಈ ಕಟ್ಟಡ ಕುಸಿಯುದಕ್ಕೆ ಕಾರಣ ಎಂದು ತಿಳಿದುಬಂದಿದೆ. ರಾಜಕಾಲುವೆಯ ಬದಿಯಲ್ಲಿಯೇ ಸರ್ಕಾರ ಮಂಜೂರು ಮಾಡಿರುವ ಸ್ಥಳದಲ್ಲಿ ಕೆಲವು ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಕಾಲುವೆ ನವೀಕರಣಕ್ಕೆ ಮಣ್ಣು ತೆಗೆಯುವ ಯಂತ್ರವನ್ನು ಬಳಸಲಾಗಿತ್ತು. ಪರಿಣಾಮ ಈ ಸ್ಥಳದಲ್ಲಿ ಭಾರೀ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮರೈಮಲೈ ಅಡಿಗಲ್ ಸಲೈ ಮತ್ತು ಕಾಮರಾಜ್ ಸಾಲೈಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಭಾಗವಾಗಿ ಕಾಲುವೆ ಬಳಿ ಪಿಡಬ್ಲ್ಯೂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಅಪಘಾತದ ವೇಳೆ ಮನೆ ಹಾಗೂ ಸುತ್ತಮುತ್ತಲಿನಲ್ಲಿ ಯಾರೂ ಇಲ್ಲದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುದುಚೇರಿಯ ಲೋಕೋಪಯೋಗಿ ಇಲಾಖೆ ಸಚಿವ ಕೆ.ಲಕ್ಷ್ಮೀನಾರಾಯಣ್ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ದುರ್ಘಟನೆ ಕುರಿತು ಪಿಡಬ್ಲ್ಯುಡಿ ಮತ್ತು ಕಂದಾಯ ಇಲಾಖೆ ವರದಿ ಸಲ್ಲಿಸಲಿದೆ. ಶೀಘ್ರವೇ ವಿಚಾರಣೆ ನಡೆಸಲಾಗುವುದು. ಮನೆ ಮಾಲೀಕರಿಗೆ ಪರಿಹಾರ ನೀಡುವ ಕುರಿತು ಸರಕಾರ ಚಿಂತನೆ ನಡೆಸಿದೆ ಎಂದು ಸಚಿವರು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu