-->
1000938341
ಮಂಗಳೂರು: ಪ್ರೀತಿಯನ್ನು ಒಲ್ಲದ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲೆಗೆತ್ನಿಸಿದ ಆರೋಪಿಗೆ 18 ವರ್ಷ ಕಠಿಣ ಸಜೆ

ಮಂಗಳೂರು: ಪ್ರೀತಿಯನ್ನು ಒಲ್ಲದ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲೆಗೆತ್ನಿಸಿದ ಆರೋಪಿಗೆ 18 ವರ್ಷ ಕಠಿಣ ಸಜೆ


ಮಂಗಳೂರು: ತನ್ನ ಪ್ರೀತಿಯನ್ನು ಒಪ್ಪಿಲ್ಲ ಎಂದು ಕೊಲೆ ಮಾಡುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದಿರುವ ಆರೋಪಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಶುಕ್ರವಾರ 18 ವರ್ಷ 1 ತಿಂಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನೃತ್ಯ ತರಬೇತಿದಾರನಾಗಿದ್ದ ಶಕ್ತಿನಗರ ನಿವಾಸಿ ಆರೋಪಿ ಸುಶಾಂತ್ ಅಲಿಯಾಸ್ ಶಾನ್(28) ಶಿಕ್ಷೆಗೊಳಗಾದ ಅಪರಾಧಿ. ಈತ ಕಾರ್ಕಳದ ನಿಟ್ಟೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ನಿರಂತರ ಕಿರುಕುಳ ನೀಡುತ್ತಿದ್ದ. ಆದರೆ ಈತನ ಪ್ರೀತಿಯನ್ನು ನಿರಾಕರಿಸಿ ವಿದ್ಯಾರ್ಥಿನಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದರಿಂದ ಕುಪಿತನಾದ ಸುಶಾಂತ್ 2019ರ ಜೂನ್ 28ರಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಹಿಂಭಾಗ ವಿದ್ಯಾರ್ಥಿನಿ ಬಸ್ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್ ನಲ್ಲಿ ಬಂದು ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದಾನೆ.

ಇದನ್ನು ಅಲ್ಲಿಯೇ ಪಕ್ಕದಲ್ಲಿದ್ದ ಆಸ್ಪತ್ರೆಯಲ್ಲಿದ್ದವರು ಕಂಡಿದ್ದರು. ಕೆಲವರು ಈ ದೃಶ್ಯವನ್ನು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದರು. ಈ ವೇಳೆ ಆಸ್ಪತ್ರೆಯ ನರ್ಸ್ ಒಬ್ಬರು ಧೈರ್ಯ ಮಾಡಿ ಓಡಿಕೊಂಡು ಬಂದು ವಿದ್ಯಾರ್ಥಿನಿಯನ್ನು ಯುವಕನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೇ ವೇಳೆ ಕುತ್ತಿಗೆಯನ್ನು ಕೊಯ್ದುಕೊಂಡಿದ್ದ ಯುವಕನನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೊಟ್ಟೆ, ಎದೆಗೆ ಗಾಯಗೊಂಡಿದ್ದ ಯುವತಿಯ ಸ್ಥಿತಿ ಗಂಭೀರವಾಗಿತ್ತು. ಅದೃಷ್ಟವಶಾತ್ ಯುವತಿ ಮೂರ್ನಾಲ್ಕು ತಿಂಗಳ ಚಿಕಿತ್ಸೆಯಲ್ಲಿ ಚೇತರಿಸಿಕೊಂಡಿದ್ದಳು. ಯುವಕನಿಗೆ ಹೆಚ್ಚೇನೂ ಗಾಯವಾಗಿರದ ಕಾರಣ ಒಂದು ವಾರ ಚಿಕಿತ್ಸೆ ನೀಡಿ ಪೊಲೀಸರು ವಶಕ್ಕೆ ಪಡೆದಿದ್ದರು.

ಅದರಂತೆ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಜು.4ರಂದು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಅಂದಿನ ಎಸ್ಸೈ ಗುರಪ್ಪ ಕಾಂತಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.

ಐಪಿಸಿ ಸೆಕ್ಷನ್ 341ರಡಿ 1 ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 326ರಡಿ 7 ವರ್ಷಗಳ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ, ಐಪಿಸಿ ಸೆಕ್ಷನ್ 307ರಡಿ 10 ವರ್ಷಗಳ ಕಠಿಣ ಸಜೆ, ಐಪಿಸಿ ಸೆಕ್ಷನ್ 354ರಡಿ 1 ವರ್ಷಗಳ ಕಠಿಣ ಸಜೆ ಹಾಗೂ 10,000 ರೂ. ದಂಡ, ದಂಡ ಪಾವತಿಸಲು ವಿಫಲವಾದಲ್ಲಿ 2 ತಿಂಗಳ ಕಠಿಣ ಸಜೆ ಅನುಭವಿಸಲು ನ್ಯಾಯಾಲಯವು ಆರೋಪಿಗೆ ಆದೇಶಿಸಿದೆ. ಆರೋಪಿ ಒಟ್ಟು 18 ವರ್ಷ 1 ತಿಂಗಳು ಅನುಭವಿಸುವಂತೆ ತೀರ್ಪು ನೀಡಿವೆ. ಅಲ್ಲದೆ ದಂಡವನ್ನು ವಿಧಿಸಿದ್ದು, ದಂಡದ ಮೊತ್ತದಲ್ಲಿ 2 ಲಕ್ಷ ರೂ.ವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಆದೇಶಿಸಿದ್ದಾರೆ. ಸಂತ್ರಸ್ತೆಯ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ವಾದ ಮಂಡಿಸಿದ್ದರು.

Ads on article

Advertise in articles 1

advertising articles 2

Advertise under the article