ವರ್ಕ್ ಫ್ರಂ ಹೋಂ ಆಮಿಷವೊಡ್ಡಿ 158 ಕೋಟಿ ರೂ. ವಂಚನೆ - ಬೃಹತ್ ಜಾಲ ಭೇದಿಸಿ 11ಮಂದಿಯನ್ನು ಬಂಧಿಸಿದ ಪೊಲೀಸರು
Wednesday, January 31, 2024
ಬೆಂಗಳೂರು: ವರ್ಕ್ ಫ್ರಂ ಹೋಂ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು ರಾಜ್ಯದ ರಾಜಧಾನಿ ಸೇರಿದಂತೆ, ಹೈದರಾಬಾದ್, ಮುಂಬೈನಿಂದ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಉದ್ಯೋಗ ಆಕಾಂಕ್ಷಿಗಳನ್ನು ವಂಚಿಸುವ ಉದ್ದೇಶದಿಂದ ಆರೋಪಿಗಳು ರಾಜ್ಯ ಮತ್ತು ಹೊರರಾಜ್ಯಗಳ ವಿವಿಧ ಬ್ಯಾಂಕ್‌ಗಳಲ್ಲಿ 30 ಖಾತೆಗಳನ್ನು ತೆರೆದಿದ್ದರು. ಈ ಖಾತೆಗಳಲ್ಲಿ ಈವರೆಗೂ 158 ಕೋಟಿ ರೂಪಾಯಿ ವಹಿವಾಟು ಆಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ವರ್ಕ್ ಫ್ರಂ ಹೋಂ ಆಮಿಷವೊಡ್ಡಿ ಆರೋಪಿಗಳು ವಿದ್ಯಾರಣ್ಯಪುರ ನಿವಾಸಿಯೊಬ್ಬರಿಗೆ ಮೋಸ ಮಾಡಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆರೋಪಿಗಳಾದ ಅಮಿರ್ ಸುಹಾಲಿ, ಇನಾಯತ್ ಖಾನ್, ನಯಾಜ್ ಅಹಮ್ಮದ್, ಆದಿಲ್ ಆಗಾ, ಸಯ್ಯದ್ ಅಬ್ಬಾಸ್ ಅಲಿಖಾನ್, ಮಿಥುನ್ ಮನೀಶ್ ಷಾ, ನಯನಾ, ಸತೀಶ್, ಮೀರ್ ಶಶಿಕಾಂತ್ ಷಾ ಸೇರಿ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
60 ಲಕ್ಷ ರೂ. ಹಣವಿದ್ದ ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್, 2 ಲ್ಯಾಪ್‌ಟಾಪ್, 15 ಸಿಮ್ ಕಾರ್ಡ್ ಹಾಗೂ ಮೂರು ಬ್ಯಾಂಕ್‌ಗಳ ಚೆಕ್ ಬುಕ್ ಜಪ್ತಿ ಮಾಡಲಾಗಿದೆ. ಜನರನ್ನು ವಂಚಿಸುವ ಉದ್ದೇಶದಿಂದ ಆರೋಪಿಗಳು ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಬ್ಯಾಂಕ್‌ಗಳಲ್ಲಿ 30 ಖಾತೆಗಳನ್ನು ತೆರೆದಿದ್ದರು. ಇಂಥ ಖಾತೆಗಳಲ್ಲಿ ಇದುವರೆಗೂ 158 ಕೋಟಿ ರೂ. ವಹಿವಾಟು ಆಗಿದೆ. ಇದೆಲ್ಲವೂ ವಂಚನೆಯ ಹಣವೆಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಜಾಲದ ವಂಚನೆಗೆ ಸಂಬಂಧಪಟ್ಟಂತೆ ದೇಶದಲ್ಲಿ 2,143 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 265 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 135 ಎಫ್‌ಐಆರ್ ದಾಖಲಾಗಿವೆ. ಈ ಜಾಲವು ಹಲವು ವರ್ಷಗಳಿಂದ ಕೃತ್ಯ ಎಸಗಿದ್ದು, ಆರೋಪಿಗಳ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಸಿಸಿಬಿ ಸೈಬರ್ ಕ್ರೈಂ ಪೊಲೀಸರು, ನಿರಂತರವಾಗಿ ಮಾಹಿತಿ ಕಲೆಹಾಕಿ ಜಾಲ ಭೇದಿಸಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದಿಂದ ದುಬೈವರೆಗೂ ಜಾಲ ಹಬ್ಬಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.