ಮಂಗಳೂರು: ದ.ಕ.ಜಿಲ್ಲೆಯ ಗಡಿ ನಿರ್ಬಂಧವಿಲ್ಲ, ಜನರಿಗೆ ಮಾಹಿತಿ ನೀಡುತ್ತೇವೆ, ಅಯ್ಯಪ್ಪ ಮಾಲಾಧಾರಿಗಳಿಗೆ ಕೋವಿಡ್ ಲಕ್ಷಣವಿದ್ದಲ್ಲಿ ತಪಾಸಣೆ - ಡಿಎಚ್ಒ

ಮಂಗಳೂರು: ಕೋವಿಡ್ ರೂಪಾಂತರಿ ತಳಿ ಜೆಎನ್ 1 ಭೀತಿ ಹುಟ್ಟಿಸುತ್ತಿದ್ದಂತೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ‌. ಈ ಬಗ್ಗೆ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಹೆಚ್.ಆರ್.ತಿಮ್ಮಯ್ಯ ಜಿಲ್ಲೆಯ ಬಗ್ಗೆ ಮಾಹಿತಿ ಹಂಚಿಕೊಂಡರು.

ಕೇರಳ ಗಡಿಭಾಗದಲ್ಲಿ ಕಡ್ಡಾಯ ತಪಾಸಣೆಯಿಲ್ಲ. ಗಡಿಭಾಗವಾಗಿರುವ ಹಿನ್ನೆಲೆಯಲ್ಲಿ ಕೇರಳದಿಂದ ಬಹಳಷ್ಟು ಮಂದಿ ಮಂಗಳೂರಿಗೆ ಬರುತ್ತಿರುತ್ತಾರೆ. ಆದ್ದರಿಂದ ನಮಗೆ ಸರ್ಕಾರದಿಂದ ಕೆಲವು ಮಾರ್ಗಸೂಚಿಗಳು ಬಂದಿದೆ. ಅದರಂತೆ ದ.ಕ. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಯಾರೂ ಆತಂಕ ಪಡುವ ಹಾಗೂ ಅನಗತ್ಯ ಗೊಂದಲ ಪಡುವ ಅವಶ್ಯಕತೆ ಇಲ್ಲ ಎಂದರು.

ಗಡಿ ಜಿಲ್ಲೆ ಕೇರಳದ ಕಾಸರಗೋಡಿನಲ್ಲಿ ನಿತ್ಯ ಒಂದೆರಡು ಪ್ರಕರಣ ಪತ್ತೆಯಾಗುತ್ತಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ. ಸದ್ಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ಕೊಡಲಾಗಿದೆ. ಆಕ್ಸಿಜನ್ ಬೆಡ್ ಗಳು, ಐಸಿಯು, ವೆಂಟಿಲೇಟ‌ರ್ ಸಿದ್ಧವಾಗಿಡಲು ಸೂಚಿಸಲಾಗಿದೆ.

ಇದರೊಂದಿಗೆ ಗಡಿಭಾಗವಾದ ಸ್ವರ್ಗ, ಸಾರಡ್ಕ, ಜಲ್ಲೂರು, ತಲಪಾಡಿ, ಈಶ್ವರಮಂಗಲದಲ್ಲಿ ಅಲರ್ಟ್‌ ಗೆ ಸೂಚಿಸಲಾಗಿದೆ. ಕೇರಳದ ಗಡಿಭಾಗವಾದ ಈ ಐದು ಕಡೆ ಯಾವುದೇ ನಿರ್ಬಂಧವಿಲ್ಲ. ಆದರೆ, ಅಲ್ಲಿಂದ ಬರುವವರಿಗೆ ನಮ್ಮ ಸಿಬ್ಬಂದಿ ಮೈಕ್ ಮೂಲಕ ಮಾಹಿತಿ ಕೊಡುತ್ತಿರುತ್ತಾರೆ. ಯಾವುದೇ ಕಡ್ಡಾಯ ತಪಾಸಣೆ ಮಾಡಲು ಸೂಚನೆ ಬಂದಿಲ್ಲ. ಅಗತ್ಯ ಬಿದ್ದರೆ ತಪಾಸಣೆ ಮಾಡುತ್ತೇವೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಮಂಗಳೂರಿನ ತಲಪಾಡಿ, ಸುಳ್ಯದ ಜಾಲ್ಲೂರು, ಪುತ್ತೂರಿನ ಸ್ವರ್ಗ, ಬಂಟ್ವಾಳದ ಸಾರಡ್ಕ ಗಡಿಯಲ್ಲಿ ಅಲರ್ಟ್‌ ಇರುತ್ತದೆ.

ಸದ್ಯ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 10,986 ಬೆಡ್ ಇದೆ, 1376 ಆಕ್ಸಿಜನ್ ಸಪೋರ್ಟ್ ಬೆಡ್,  728ಐಸಿಯು , 336 ವೆಂಟಿಲೇಟರ್ ಇದೆ. ಶಬರಿಮಲೆಗೆ ಹೋಗಿ ಬಂದವರಿಗೆ ರೋಗ ಲಕ್ಷಣ ಇದ್ರೆ ಪರೀಕ್ಷೆಗೆ ಒಳಪಡಿಸ್ತೇವೆ. ಸದ್ಯ ನಮಗೆ ನಿತ್ಯ 321 ಮಂದಿಯನ್ನು ಪರೀಕ್ಷೆಗೊಳಪಡಿಸುವ ಗುರಿ ಇದೆ ಎಂದರು.