ಚೆಕ್ ಬೌನ್ಸ್ ಪ್ರಕರಣ: ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ, ತಪ್ಪಿದ್ದಲ್ಲಿ ಜೈಲು ಶಿಕ್ಷೆ
Saturday, December 30, 2023
ಬೆಂಗಳೂರು: ಹನ್ನೆರಡು ವರ್ಷಗಳ ಹಿಂದಿನ ಚೆಕ್ ಬೌನ್ಸ್ ಪ್ರಕರಣದಲ್ಲಿ ಕರ್ನಾಟಕದ ಜನಪ್ರತಿನಿಧಿ ನ್ಯಾಯಾಲಯ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗರ ಬರೋಬ್ಬರಿ 6.96 ಕೋಟಿ ರೂ. ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳ ಸೆರೆವಾಸ ಅನುಭವಿಸಬೇಕು ಎಂದು ಹೇಳಿದೆ.
2011ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಮಧು ಬಂಗಾರಪ್ಪ ತಾವೇ ಸ್ಥಾಪಿಸಿದ್ದ ಆಕಾಶ್ ಆಡಿಯೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆ ಸಂಸ್ಥೆಯಿಂದ ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆಗೆ 6,96,60,000 ಕೋಟಿ ರೂ. ಸಂದಾಯವಾಗಬೇಕಿತ್ತು. ಹಲವಾರು ವರ್ಷಗಳಿಂದ ಬಾಕಿ ಇರಿಸಿದ್ದ ಹಣಕ್ಕಾಗಿ ಮಧು ಬಂಗಾರಪ್ಪ ಚೆಕ್ ನೀಡಿದ್ದರು. ಆದರೆ, ಚೆಕ್ ಬೌನ್ಸ್ ಆಗಿದ್ದರಿಂದ ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಸುದೀರ್ಘ ವಿಚಾರಣೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ಹೊರಬಿದ್ದಿದೆ.
ಮಧುಬಂಗಾರಪ್ಪ ಒಟ್ಟು 6,96,70,000 ರೂ. ದಂಡವನ್ನಾಗಿ ಕಟ್ಟಬೇಕು. ಅದರಲ್ಲಿ 6 ಕೋಟಿ 96 ಲಕ್ಷದ 60 ಸಾವಿರ ರೂ. ರಾಜೇಶ್ ಎಕ್ಸ್ ಪೋರ್ಟ್ಸ್ ಅವರಿಗೆ ನೀಡಬೇಕು. ಉಳಿದ 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ದಂಡದ ರೂಪದಲ್ಲಿ ಕಟ್ಟಬೇಕು ಎಂದು ಹೇಳಿದೆ. ದಂಡ ತೆರಲಯ ತಪ್ಪಿದರೆ 6 ತಿಂಗಳ ಕಾರಾಗೃಹ ವಾಸ ಅನುಭವಿಸಬೇಕು ಎಂದು ತೀರ್ಪು ಹೇಳಿದೆ.