ಮಂಗಳೂರು: ರಾಹುಲ್ ಗಾಂಧಿ ಯಾವಾಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿದರೋ ಅಲ್ಲಿಂದ ಕಾಂಗ್ರೆಸ್ ಪಕ್ಷದ ರಾಹುಕಾಲ ಶುರುವಾಗಿದೆ - ಬಿ‌.ವೈ.ವಿಜಯೇಂದ್ರ ವ್ಯಂಗ್ಯ


ಮಂಗಳೂರು: ಶುಭಕಾರ್ಯ ಮಾಡಬೇಕಾದಲ್ಲಿ ಒಳ್ಳೆಯ ಸಮಯ ನೋಡಿ ಪೂಜೆ ಮಾಡುತ್ತೇವೆ‌. ರಾಹುಕಾಲದಲ್ಲಿ ಏನೂ ಮಾಡೋಲ್ಲ. ಆದರೆ ಕಾಂಗ್ರೆಸ್ ಪಕ್ಷದ ನಾಯಕನ ಹೆಸರೇ ರಾಹುಲ್ ಗಾಂಧಿ. ರಾಹುಕಾಲಕ್ಕೂ ರಾಹುಲ್ ಗಾಂಧಿಗೂ ಯಾವ ವ್ಯತ್ಯಾಸವೂ ಇಲ್ಲ. ಯಾವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿದರೋ ಆ ಕ್ಷಣದಿಂದ ಕಾಂಗ್ರೆಸ್ ಪಕ್ಷದ ರಾಹುಕಾಲ ಶುರುವಾಗಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ‌.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.

ಮಂಗಳೂರಿನ ಸಿ.ವಿ.ನಾಯಕ್ ಹಾಲ್ ನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕೆಂದು ಸಂಚು ರೂಪಿಸಿ I N D I A ಪಕ್ಷವನ್ನು ಕಟ್ಟಲಾಗಿದೆ. ಅದರ ನಾಯಕ ರಾಹುಲ್ ಗಾಂಧಿ. ಅವರಿಗೆ ಹಾಕುವ ಸವಾಲೇನೆಂದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುವುದು ಖಂಡಿತಾ. ಅದನ್ನು ತಡೆಯಲು ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದರು.




ಅಧಿಕಾರದ ದರ್ಪದಿಂದ ನಡೆಯುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಹೇಳುವುದೇನೆಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 28ಕ್ಕೆ 28 ಸ್ಥಾನವನ್ನು ಸಂಸದರನ್ನು ಕಳುಹಿಸುವ ಮೂಲಕ ನರೇಂದ್ರ ಮೋದಿಯವರ ಕೈಬಲ ಪಡಿಸುತ್ತೇವೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ರಾಜ್ಯ ಸುತ್ತುವ ವೇಳೆ ಬೂತ್ ಅಧ್ಯಕ್ಷರುಗಳನ್ನು ಭೇಟಿ ಮಾಡಿ ಅವರಿಗೆ ಶಕ್ತಿ ಕೊಡುವ ಕಾರ್ಯವನ್ನು ಮಾಡುತ್ತಿದ್ದೇನೆ. ಅದರ ಮೂಲಕ ಕಾರ್ಯಕರ್ತರನ್ನು ತಲುಪುವ ಕೆಲಸ ಮಾಡುತ್ತಿದ್ದೇನೆ. ತಾಪಂ, ಜಿಪಂ ಚುನಾವಣೆಯನ್ನೂ ಎಂಪಿ, ಎಂಎಲ್ಎ ಚುನಾವಣೆಯಂತೆ ಗಂಭೀರವಾಗಿ ಪರಿಗಣಿಸಿ ಕಾರ್ಯಕರ್ತರನ್ನು ಗೆಲ್ಲಿಸುವ ಕಾರ್ಯವನ್ನು ಮಾಡುತ್ತೇವೆ‌. ಬಿಜೆಪಿಯನ್ನು ಎತ್ತರಕ್ಕೆ ಏರಿಸಿದ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆ ಕಾರ್ಯಕರ್ತರಿಗಿದೆ. ಆದ್ದರಿಂದ ಮುಂದಿನ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ದ.ಕ.ಜಿಲ್ಲಾ ಲೋಕಸಭಾ ಚುನಾವಣಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರನ್ನು ಗೆಲ್ಲಿಸುವ ಕೆಲಸ ಕಾರ್ಯಕರ್ತರು ಮಾಡಬೇಕಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.