ಕುಂದಾಪುರ: ಹಾವು ಎಂದರೆ ಸಾಕು, ಎಲ್ಲರೂ ಒಮ್ಮೆ ಬೆಚ್ಚಿ ಬೀಳುವುದು ಸಹಜ. ಅಂಥದ್ದರಲ್ಲಿ ಇಲ್ಲೊಬ್ಬ ಪುಟ್ಟಪೋರ, ಬೃಹತ್ ಗಾತ್ರದ ಹೆಬ್ಬಾವನ್ನೇ ಹಿಡಿದು ಎಲ್ಲರೂ ಬೆರಗಾಗುವಂತೆ ಮಾಡಿದ್ದಾನೆ. ಈತ ಹೆಬ್ಬಾವಿನ ಬಾಯಿಯ ಭಾಗಕ್ಕೇ ಕೈ ಹಾಕಿ ಹಿಡಿದಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ. ಈತನ ಸಾಹಸಕ್ಕೆ ಎಲ್ಲರೂ ತಲೆದೂಗಿದ್ದಾರೆ.
ಈ ಪ್ರಕರಣ ನಡೆದಿರೋದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ. ಸಾಲಿಗ್ರಾಮ ಪರಿಸರದಲ್ಲಿ 12 ವರ್ಷದ ಪೋರ ಹೆಬ್ಬಾವಿಗೆ ಹೆದರದೆ ಅದರ ತಲೆಗೆ ಕೈಹಾಕಿ ಹಿಡಿದ ದೃಶ್ಯ ವಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿದೆ.
ಹೀಗೆ ಹೆಬ್ಬಾವನ್ನು ಹಿಡಿದ ಬಾಲಕನ ಹೆಸರು ಧೀರಜ್ ಐತಾಳ್. ಈತ ಚಿತ್ರಪಾಡಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ. ಈತನ ತಂದೆ ಸುಧೀಂದ್ರ ಐತಾಳ್, ಇವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಮೀಪ ವಾಸವಿದ್ದು ಪ್ರಾಣಿಪ್ರೇಮಿಯಾಗಿದ್ದಾರೆ. ಗಾಯಗೊಂಡ ಪ್ರಾಣಿ-ಪಕ್ಷಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ತಾವು ಪ್ರಾಣಿಗಳೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿಕೊಳ್ಳುವುದರ ಜೊತೆಗೆ ಪುತ್ರನಿಗೂ ಆ ಕುರಿತ ಅಭಿರುಚಿ ಬೆಳೆಸಿದ್ದಾರೆ. ಈ ಪುಟ್ಟ ಪೋರನ ಧೀರತನಕ್ಕೆ ಮನಸೋತಿರುವ ಜನರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.