ಉದ್ಯೋಗ ಕೊಡಿಸುವುದಾಗಿ ಉಪನ್ಯಾಸಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಕೆಲಸ ತೆಗಿಸಿ ಕೊಡುವುದಾಗಿ ನಂಬಿಸಿ ಲಾಡ್ಜ್ ಗೆ ಕೊರೆದೊಯ್ದು ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಖಾಸಗಿ ಕಾಲೇಜಿನ ಉಪನ್ಯಾಸಕ ಮದನ್ ಕುಮಾರ್ ಎಂಬಾತನನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಮದನ್ ಕುಮಾರ್ ಗೆ ಅದೇ ಕಾಲೇಜಿನ ವಿದ್ಯಾರ್ಥಿನಿ ಪಾರ್ಟ್‌ ಟೈಮ್ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಮದನ್ ಕುಮಾರ್, ವಿದ್ಯಾರ್ಥಿನಿಯನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಎಂಜಿ ರಸ್ತೆಯಲ್ಲಿ ಸಂದರ್ಶನ ಇದೆ ಎಂದು ಹೊಟೇಲ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ.

ಅಲ್ಲದೇ ವಿಡಿಯೋ ಮಾಡಿ ಸಂತ್ರಸ್ತೆಗೆ ಬೆದರಿಕೆವೊಡ್ಡಿದ್ದ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.