ಹುಲಿಯುಗುರು ಧರಿಸಿದ್ದಕ್ಕೆ ಅರೆಸ್ಟ್: ಆದರೆ ಇಲ್ಲೊಬ್ಬ ಹುಲಿಯೊಂದಿಗೆ ವಾಕಿಂಗ್ ಹೊರಟಿದ್ದಾನೆ - ವೀಡಿಯೋ ವೈರಲ್


ಇಸ್ಲಮಾಬಾದ್: ಹುಲಿಯುಗುರು ಪೆಂಡೆಂಡ್​ ಹೊಂದಿರುವ ಆರೋಪದ ಮೇಲೆ ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಬಿಗ್​ಬಾಸ್​ ಮನೆಯಿಂದಲೇ ಅರೆಸ್ಟ್ ಬಳಿಕ ಹುಲಿ, ಹುಲಿಯುಗುರು ಬಗ್ಗೆ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಹೊಂದಿರುವುದು ಅಪರಾಧ. ಆದ್ದರಿಂದ ಹುಲಿ ಉಗುರು ಧರಿಸಿದ ಸೆಲೆಬ್ರಿಟಿ ಮನೆಗಳನ್ನು ಅರಣ್ಯಾಧಿಕಾರಿಗಳು ಜಾಲಾಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಹಲವರ ಹುಬ್ಬೇರುವಂತೆ ಮಾಡಿದೆ.


ಅದೇನೆಂದರೆ, ವಾಹನ ನಿಬಿಡ ರಸ್ತೆಯಲ್ಲಿ ಒಬ್ಬ ಅಸಾಮಿ ಹುಲಿಯೊಂದರ ಕತ್ತಿಗೆ ಹಗ್ಗ ಬಿಗಿದು ನಾಯಿಯಂತೆ ವಾಕಿಂಗ್​ ಕರೆದುಕೊಂಡು ಹೋಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಾಹನ ಅತ್ತಿಂದಿತ್ತ ರಸ್ತೆಯಲ್ಲಿ ಯುವಕನೊಬ್ಬ ಹುಲಿಯನ್ನು ವಾಕಿಂಗ್‌ಗೆ ಕರೆದೊಯ್ದಿದ್ದಾನೆ. ಆದರೆ ರಸ್ತೆಯಲ್ಲಿ ತನ್ನ ಸಹಜ ಗುಣ ಪ್ರದರ್ಶಿಸಿರುವ ಹುಲಿ ಹೋಗುತ್ತಿದ್ದ ವಾಹನಗಳ ಮೇಲೆ ಹಾರಲು ಯತ್ನಿಸಿದೆ. ಆದರೆ, ಯುವಕ ಹಗ್ಗವನ್ನು ಬಿಗಿಯಾಗಿ ಹಿಡಿದ್ದರಿಂದ ಅದು ಸಾಧ್ಯವಾಗಲಿಲ್ಲ.


ಈ ವಿಡಿಯೋ ಪಾಕಿಸ್ತಾನದ್ದು ಎಂದು ಹೇಳಲಾಗಿದೆ. ಟಿಪ್​ಟಾಪ್​ ಹೆಸರಿನ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಆಗಿ ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಲೈಕ್ಸ್​ ಮಾಡಿದ್ದಾರೆ.