ಒಂದೂವರೆ ವರ್ಷದ ಮಗುವನ್ನೇ ಕೆರೆಗೆಸೆದು ಪಾಪಿ ತಂದೆ: ಅಳುತ್ತಿರುವ ಮಗುವನ್ನು ಸಾಕಲಾಗುತ್ತಿಲ್ಲವೆಂದು ಕೊಲೆ
Thursday, October 19, 2023
ಮೈಸೂರು: ಪಾಪಿ ತಂದೆಯೋರ್ವನು ಒಂದೂವರೆ ವರ್ಷದ ಪುತ್ರನನ್ನು ಕೆರೆಗೆ ಎಸೆದು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದಿದೆ.
ಮಾಕೋಡು ಗ್ರಾಮದ ನಿವಾಸಿ ಗಣೇಶ್ ಪುತ್ರನನ್ನು ಹತ್ಯೆಗೈದಿರುವ ಪಾಪಿ ತಂದೆ. ಪ್ರಕರಣ ಸಂಬಂಧ ಪಿರಿಯಾಪಟ್ಟಣ ಪೊಲೀಸರು ಗಣೇಶ್ ನನ್ನು ಬಂಧಿಸಿದ್ದಾರೆ.
2014ರಲ್ಲಿ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ಲಕ್ಷ್ಮಿ ಎಂಬಾಕೆಯನ್ನು ಗಣೇಶ್ ವಿವಾಹವಾಗಿದ್ದ. ಬಳಿಕ ದಂಪತಿ ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ವಾಸವಿದ್ದರು. ಈ ದಂಪತಿಗೆ ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಪುತ್ರಿಯರಿದ್ದರು. ಬಳಿಕ ಲಕ್ಷ್ಮಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದ್ದಾರೆ. ಆ ನಂತರ ಗಣೇಶ್ ದೇವನಹಳ್ಳಿಯಿಂದ ತಮ್ಮ ಸ್ವಗ್ರಾಮ ಪಿರಿಯಾಪಟ್ಟಣದ ಮಾಕೋಡಿಗೆ ಬಂದು ವಾಸಿಸಲು ಆರಂಭಿಸಿದ್ದರು. ಈ ವೇಳೆ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅತ್ತೆಯ ಬಳಿಯೇ ಬಿಟ್ಟು ಬಂದಿದ್ದರು. ಆದರೆ ಒಂದೂವರೆ ವರ್ಷದ ಮಗನನ್ನು ತನ್ನ ಬಳಿ ಇಟ್ಟುಕೊಂಡಿದ್ದರು. ಆದರೆ ಆ ಗಂಡು ಮಗು ಬಹಳ ಅಳುತ್ತಿತ್ತು. ಆದ್ದರಿಂದ ಪುತ್ರನನ್ನು ಸಾಕಲಾಗದೇ ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಗಣೇಶ್ ಅವರ ಅತ್ತೆ ಅಂಜನಮ್ಮ ಪಿರಿಯಾಪಟ್ಟಣ ಪೊಲೀಸರಿಗೆ ಗಣೇಶ್ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು ಗಣೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಣೇಶ್, ತನ್ನ ತಾಯಿ ಮತ್ತು ಅತ್ತೆ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅದು ಸದಾ ಅಳುತ್ತಿತ್ತು. ಜೊತೆಗೆ ಅದನ್ನು ಸಾಕಲು ನನಗೆ ಕಷ್ಟ ಆಯಿತು. ಈ ಹಿನ್ನೆಲೆಯಲ್ಲಿ ಮಗುವನ್ನು ಕೆರೆಗೆ ಎಸೆದು ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.