ಯುವತಿಯೊಂದಿಗೆ ಮಾತನಾಡಿದ್ದೇ ತಪ್ಪಾಯ್ತು ಎಂದು ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯ
Monday, October 2, 2023
ಹೊಸದಿಲ್ಲಿ: ಯುವತಿಯೊಬ್ಬಳೊಂದಿಗೆ ಮಾತನಾಡಿದ್ದೇ ತಪ್ಪಾಯ್ತು ಎಂದು ನಡೆದ ಜಗಳವು ಇಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಈಶಾನ್ಯ ದೆಹಲಿಯಲ್ಲಿ ನಡೆದ ಘಟನೆ ಭಲಾ ಪ್ರದೇಶದಲ್ಲಿ ಶನಿವಾರ ನಡೆದಿದೆ. ಈ ಘಟನೆಯಲ್ಲಿ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಮತಾ ವಿಹಾರದ ಬಳಿ ಘಟನೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಆಗ ಹಿಮಾಂಶು ಎಂಬ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಪೊಲೀಸರು ಬಾಬು ಜಗಜೀವನರಾಂ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಆಜಾದ್ ಎಂಬ ವ್ಯಕ್ತಿ ಕೊನೆಯುಸಿರೆಳೆದರು. ವೀರೇಂದ್ರ ಎಂಬ ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವೀರೇಂದ್ರನ ಸಹೋದರ ಆಜಾದ್ ಹಾಗೂ ಹೇಮು ಎಂಬುವವರು ಯುವತಿಯೊಬ್ಬಳೊಂದಿಗೆ ಮಾತನಾಡುತ್ತಿದ್ದರು. ಸೆಪ್ಟೆಂಬರ್ 30ರಂದು ಆಜಾದ್ ಹಾಗೂ ಹೇಮು ನಡುವೆ ಮೊಬೈಲ್ ನಲ್ಲಿ ವಾಗ್ವಾದ ನಡೆದಿತ್ತು. ಹೇಮು ಹಾಗೂ ಆತನ ಸಹೋದರ ಹಿಮಾಂಶು ಕೆಲ ಸ್ನೇಹಿತರೊಂದಿಗೆ ಸೇರಿ ಆಜಾದ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ. ಈ ಸಂಘರ್ಷದಲ್ಲಿ ಹಿಮಾಂಶು ಹಾಗೂ ಆಜಾದ್ ಮೃತಪಟ್ಟಿದ್ದಾರೆ. ಘರ್ಷಣೆ ನಿಲ್ಲಿಸಲು ಮಧ್ಯ ಪ್ರವೇಶಿಸಿದ ವೀರೇಂದ್ರ ಅವರಿಗೂ ಗಾಯಗಳಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಐಪಿಸಿ ಸೆಕ್ಷನ್ 302 ಮತ್ತು 34ರ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.