ಒತ್ತೆಯಾಳುಗಳಿಬ್ಬರನ್ನು ಬಿಡುಗಡೆ ಮಾಡಿದ ಹಮಾಸ್ ಉಗ್ರರು
Saturday, October 21, 2023
ಟೆಲ್‌ಅವೀವ್: ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್ ಪ್ರಜೆಗಳನ್ನು ಮಾನವೀಯ ಆಧಾರದ ಮೇಲೆ ಹಮಾಸ್ ಸಶಸ್ತ್ರ ವಿಭಾಗ ಇಝ್ ಎಲ್-ದೀನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಶುಕ್ರವಾರ ಬಿಡುಗಡೆ ಮಾಡಿದೆ. ಅಲ್ಲದೆ ಮತ್ತಷ್ಟು ಮಂದಿಯನ್ನು ಬಿಡುಗಡೆ ಮಾಡುವ ಸುಳಿವನ್ನೂ ನೀಡಿದೆ.
ಜ್ಯುಡಿತ್ ತಾಯ್ ರಾನನ್ ಹಾಗೂ ಆಕೆಯ ಹದಿಹರೆಯದ ಪುತ್ರಿ ನತಾಲಿ ಶೋಷನಾ ರಾನನ್ ರನ್ನು ಶುಕ್ರವಾರ ಗಾಝಾ ಗಡಿಯಲ್ಲಿ ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿ ಬಲಿ ಬಿಡಲಾಗಿದೆ. ಬಳಿಕ ಅವರನ್ನು ಕೇಂದ್ರ ಇಸ್ರೇಲಿನ ಮಿಲಿಟರಿ ನೆಲೆಗೆ ಕರೆದೊಯ್ಯಲಾಗಿದೆ. ಈ ಬಿಡುಗಡೆಯನ್ನು ದೃಢಪಡಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಉಭಯ ದೇಶಗಳ ಪುನಶ್ಚೇತನ ಹಾಗೂ ಶಮನ ಪ್ರಕ್ರಿಯೆಯನ್ನು ಸರ್ಕಾರ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಹೋರಾಟಗಾರರು ದಾಳಿ ನಡೆಸಿರತ್ತು. ಈ ವೇಳೆ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕಾದವರನ್ನು ಬಿಡುಗಡೆ ಮಾಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸಹ ಪ್ರಜೆಗಳು ಕಳೆದ 14 ದಿನಗಳಿಂದ ಈ ಭಯಾನಕ ಘಟನಾವಳಿಗಳಿಗೆ ಸಾಕ್ಷಿಯಾಗಿದ್ದಾರೆ. ಇವರು ಶೀಘ್ರವೇ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರುವುದರಿಂದ ಅತೀವ ಸಂತೋಷವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬೈಡನ್ ಹೇಳಿಕೆ ನೀಡಿದ್ದಾರೆ.
ಗಾಝಾ ಆಡಳಿತಗಾರರು ಸೆರೆ ಇರಿಸಿಕೊಂಡಿರುವ 200 ಒತ್ತೆಯಾಳುಗಳ ಪೈಕಿ ಬಿಡುಗಡೆಯಾದವರಲ್ಲಿ ರಾನನ್ ಮೊದಲಿಗರು. ನಾಗರಿಕ ಒತ್ತೆಯಾಳುಗಳ ಬಿಡುಗಡೆಗಾಗಿ ಹಮಾಸ್, ಕತಾರ್ ಹಾಗೂ ಈಜಿಪ್ಟ್ ಜತೆಗೆ ಕಾರ್ಯ ನಿರ್ವಹಿಸಲಿದ್ದು, ಇದರಿಂದ ಮತ್ತಷ್ಟು ಮಂದಿಯ ಬಿಡುಗಡೆಯ ಸುಳಿವು ದೊರಕಿದೆ.