ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಿಂದ ಆಯೋಜನೆಗೊಳ್ಳುತ್ತಿರುವ ಸಂಭ್ರಮದ ಮಂಗಳೂರು ದಸರಾ ಶೋಭಾಯಾತ್ರೆಗೆ ಹೋಗುವ ಅವಸರದಲ್ಲಿದ್ದ ಬೈಕ್ ಸವಾರನೋರ್ವ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ದಾರುಣವಾಗಿ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆ ಸೋಝಾ ಇಲೆಕ್ಟಿಕಲ್ಸ್ ಮುಂಭಾಗ ಸಂಭವಿಸಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಲಖಮಾಪುರ ನಿವಾಸಿ ಎಲ್ಲವ್ವ ದೊಡ್ಡಮನಿ (50) ಮೃತಪಟ್ಟ ಮಹಿಳೆ. ಎಲ್ಲವ್ವರ ಪತಿ ಶಿವಪ್ಪ ಕೂಲಿ ಕಾರ್ಮಿಕರಾಗಿದ್ದು ಸಾಯಂಕಾಲದ ವೇಳೆ ಬಬ್ಬುಕಟ್ಟೆ ಬಳಿಯ ಸೋಝಾ ಇಲೆಕ್ಟಿಕಲ್ಸ್ ಬಳಿ ಮನೆಯಲ್ಲಿ ಸೆಕ್ಯುರಿಟಿ ಸೆಕ್ಯುರಿಟಿ ವೃತ್ತಿ ನಿರ್ವಹಿಸಿತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಬಾದಾಮಿಯಿಂದ ಪತ್ನಿ ಎಲ್ಲವ್ವ ಬಂದು ಪತಿಯೊಂದಿಗೆ ಉಳಿದಿದ್ದರು. ಮಂಗಳವಾರ ಸಂಜೆ 8 ಗಂಟೆ ಸುಮಾರಿಗೆ ದಿನಸಿ ಖರೀದಿಗೆ ತೆರಳಿದ್ದ ಎಲ್ಲವ್ವ ಮತ್ತೆ ಮನೆಗೆ ವಾಪಸ್ ಬರಲು ರಸ್ತೆ ದಾಟುತ್ತಿದ್ದರು. ಈ ವೇಳೆ ಮಂಗಳೂರು ದಸರಾಕ್ಕೆ ತೆರಳುತ್ತಿದ್ದ ದೈಗೋಳಿ ನಿವಾಸಿ ಗಗನ್ ಎಂಬಾತನ ಬೈಕ್ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಎಲ್ಲವ್ವರನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೈಕಿನಲ್ಲಿದ್ದ ಸವಾರ ಗಗನ್ ಹಾಗೂ ಇನ್ನೋರ್ವನಿಗೆ ಗಾಯವಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.