ಮಂಗಳೂರು: ಮಂಚದಡಿ ಅವಿತುಕುಳಿತು ಮಲಗಿದ್ದ ಮಹಿಳೆಯ ಕೈಕಾಲು ಸವರಿದ ಕಾಮುಕ ಅರೆಸ್ಟ್

ಮಂಗಳೂರು: ಮನೆಯೊಂದರೊಳಗೆ ಅಕ್ರಮವಾಗಿ ಪ್ರವೇಶಿಸಿ ಮಂಚದಡಿ ಅವಿತು ಕುಳಿತು ಮಲಗಿದ್ದ ಮನೆಯೊಡತಿಯ ಕೈಕಾಲು ಸವರಿ ಲೈಂಗಿಕ ಕಿರುಕುಳ ನೀಡಿದ ಕಾಮುಕನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಹರೇಕಳ ನಿವಾಸಿ  ನೌಫಾಲ್ ಬಂಧಿತ ಆರೋಪಿ.

ಮಹಿಳೆ ತನ್ನ ಮಕ್ಕಳೊಂದಿಗೆ ಮಂಚದಲ್ಲಿ ಮಲಗಿದ್ದರು. ಈ ವೇಳೆ ನೌಫಾಲ್ ಮನೆಯೊಳಗೆ ಅಕ್ರಮ ಪ್ರವೇಶಿಸಿ ಮಂಚದಡಿ ಅವಿತು ಕೊಂಡಿದ್ದಾನೆ. ರಾತ್ರಿ 12.10ರ ಸುಮಾರಿಗೆ ಮಲಗಿದ್ದ ಮಹಿಳೆಯ ಕಾಲು ಮತ್ತು ಕೈಯನ್ನು ಯಾರೋ ಸವರಿದಂತಾಗಿದೆ. ಅನುಮಾನಗೊಂಡ ಅವರು ಎದ್ದು ಲೈಟ್ ಹಾಕಿದಾಗ ಮನೆಯೊಳಗೆ ಅವಿತುಕೊಂಡಿದ್ದ ಕಾಮುಕ ನೌಫಾಲ್ ಮಂಚದ ಕೆಳಗಿನಿಂದ ಎದ್ದು ಹಿಂಬಾಗಿಲು ತೆರೆದು ಹೋಗಿದ್ದಾನೆ. ಈ ಬಗ್ಗೆ ಮಹಿಳೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ.