-->

ವಿಶ್ವದ ಅತೀ ಹಿರಿಯ ಸ್ಕೈಡೈವರ್​ ಎಂಬ ಗಿನ್ನೆಸ್​ ದಾಖಲೆ ಬರೆದು ಇಹಲೋಕ ತ್ಯಜಿಸಿದ 104ರ ವೃದ್ಧೆ..!

ವಿಶ್ವದ ಅತೀ ಹಿರಿಯ ಸ್ಕೈಡೈವರ್​ ಎಂಬ ಗಿನ್ನೆಸ್​ ದಾಖಲೆ ಬರೆದು ಇಹಲೋಕ ತ್ಯಜಿಸಿದ 104ರ ವೃದ್ಧೆ..!

ನವದೆಹಲಿ: ವಿಶ್ವದ ಅತೀ ಹಿರಿಯ ಸ್ಕೈಡೈವರ್​ ಎಂದು ಗಿನ್ನೆಸ್​ ಬುಕ್​ ರೆಕಾರ್ಡ್​ ದಾಖಲೆ ಬರೆದಿದ್ದ ಡೊರೊಥಿ ಹಾಫ್ನರ್​ (104) ತನ್ನ ಬಯಕೆಯನ್ನು ಈಡೇರಿಸಿಕೊಂಡು ಕೊನೆಯುಸಿರೆಳೆದ್ದಾರೆ.

ಇತ್ತೀಚೆಗಷ್ಟೇ ಡೊರೊಥಿ ಸ್ಕೈಡೈವ್​ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ವಿಡಿಯೋ ನೋಡಿದ ಎಲ್ಲರೂ ಇವರ ಸಾಹಸ ನೋಡಿ ಬೆರಗಾಗಿದ್ದರು. ಏಕೆಂದರೆ, 104ರ ಇಳಿ ವಯಸ್ಸಿನಲ್ಲಿ ಸ್ಕೈಡೈವ್​ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ, ಇದಕ್ಕಾಗಿ ಅಷ್ಟೊಂದು ಧೈರ್ಯ ಬೇಕಾಗುತ್ತದೆ. ಆದರೆ ಡೊರೊಥಿ ಆ ಧೈರ್ಯವನ್ನು ಪ್ರದರ್ಶಿಸಿ, ಗಿನ್ನೆಸ್​ ಬುಕ್​ ರೆಕಾರ್ಡ್​ನಲ್ಲಿ ದಾಖಲಾಗಿದ್ದಾರೆ. ಸ್ವೀಡನ್​ ಮೂಲದ 103 ವಯಸ್ಸಿನ ಮಹಿಳೆಯ ಹೆಸರಿನಲ್ಲಿದ್ದ ಈ ದಾಖಲೆಯನ್ನು ಡೊರೊಥಿ ಇತ್ತೀಚೆಗಷ್ಟೇ ಮುರಿದಿದ್ದಾರೆ.

ಸೋಮವಾರ ಬೆಳಗ್ಗೆ ಬ್ರೂಕ್‌ಡೇಲ್ ಲೇಕ್ ವ್ಯೂ ಸೀನಿಯರ್ ಲಿವಿಂಗ್ ಕಮ್ಯುನಿಟಿ ಕಟ್ಟಡದಲ್ಲಿ ಅವರು ಮೃತದೇಹವಾಗಿ ಡೊರೊಥಿ ಪತ್ತೆಯಾಗಿದ್ದಾರೆ ಎಂದು ಅವರ ಆಪ್ತ ಸ್ನೇಹಿತ ಜೋ ಕಾನಂಟ್ ಹೇಳಿದರು. ಭಾನುವಾರ ರಾತ್ರಿ ನಿದ್ರೆಯಲ್ಲಿ ಇರುವಾಗಲೇ ಡೊರೊಥಿ ಮೃತಪಟ್ಟಿರಬಹುದು ಎಂದು ಕಾನಂಟ್ ತಿಳಿಸಿದ್ದಾರೆ.

ಡೊರೊಥಿ ಅ.1ರಂದು ಚಿಕಾಗೋ ವಿಮಾನ ನಿಲ್ದಾಣದಲ್ಲಿ ಸ್ಕೈಡೈವ್ ಮಾಡಿದ್ದರು. ತರಬೇತುದಾರನ ಸಹಾಯದಿಂದ ಆಕಾಶದಿಂದ ಡೈವಿಂಗ್​ ಮಾಡಿದ ಡೊರೊಥಿ, ಸಂತೋಷದಿಂದಲೇ ಮಾತನಾಡುತ್ತಾ ಸುರಕ್ಷಿತವಾಗಿ ಲ್ಯಾಂಡಿಂಗ್ ಆದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯಿತು. ಸ್ಕೈಡೈವ್​ ಮಾಡುವಾಗ ತನಗೆ ಯಾವ ಭಯವೂ ಆಗಿಲ್ಲ. ನನಗೆ ಸಂತೋಷವಾಗಿದೆ ಮತ್ತು ಆ ಕ್ಷಣವನ್ನು ನಾನು ತುಂಬಾ ಎಂಜಾಯ್​ ಮಾಡಿದೆ ಎಂದು ಮಾಧ್ಯಮಗಳಿಗೆ ಡೊರೊಥಿ ಪ್ರತಿಕ್ರಿಯಿಸಿದರು.

ಡೊರೊಥಿ ಅವರ ಸಾವಿನ ಸುದ್ದಿ ತಿಳಿದು ಅವರ ಪ್ರೀತಿ-ಪಾತ್ರರಿಗೆ ತುಂಬಾ ದುಃಖವಾಗಿದೆ. ಜೀವನದ ಕೊನೆಯ ಹಂತದಲ್ಲಿ ಮೂಲೆಗೆ ಸೇರುವವರ ನಡುವೆ ಇಳಿ ವಯಸ್ಸಿನಲ್ಲೂ ಜೀವನೋತ್ಸಾಹ ತೋರಿದ ಡೊರೊಥಿ ಅವರ ಸಾವಿಗೆ ಅವರ ಆಪ್ತರು, ಬಂಧು-ಬಳಗದವರು ಸಂತಾಪವನ್ನು ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article