ಉಡುಪಿ: ಉಡುಪಿಯ ಉದ್ಯಮಿಯೊಬ್ಬರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ರೂಪಾಯಿ ವಂಚಿಸಿದ ಹಿಂದೂ ಭಾಷಣಕಾರ್ತಿ ಚೈತ್ರ ಕುಂದಾಪುರಳನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚೈತ್ರ ಕುಂದಾಪುರ ವಿರುದ್ದ ವಂಚನೆಯ ಪ್ರಕರಣ ದಾಖಲಾಗಿತ್ತು. ಈಕೆ ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದಳು. ಇವಳು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಳು.
ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಚೈತ್ರ ಕುಂದಾಪುರ ಳನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ, ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರಿಗೆ ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಲಾಗಿತ್ತು. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕನ ಮುಗ್ಧತೆ ಯನ್ನು ಬಳಸಿಕೊಂಡು ವಂಚನೆ ಮಾಡಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರ ಕುಂದಾಪುರ ಟಿಕೆಟ್ ಕೊಡಿಸುವುದಾಗಿ ನಾಲ್ಕೈದು ಜನರ ತಂಡದಿಂದ ನಾಟಕವಾಡಿದ್ದಾಳೆ. ಈಕೆ ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಪಂಗನಾಮ ಹಾಕಿದ್ದಾಳೆ. ಆರ್ ಎಸ್ ಎಸ್ ಪ್ರಮುಖರು ಎಂದು ನಕಲಿ ನಾಯಕರನ್ನು ಸೃಷ್ಟಿ ಮಾಡಿ ಈಕೆಯ ತಂಡ ವಂಚನೆ ಎಸಗಿದೆ.
ಚೈತ್ರ ಕುಂದಾಪುರ ಜೊತೆಗೆ ಶ್ರೀಕಾಂತ್ ನಾಯಕ್ ಪೆಲತ್ತೂರು ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.