MANGALORE- ಮೂಲ್ಕಿಯಲ್ಲಿ ಭೀಕರ ಬೈಕ್-ಕಾರು ಅಪಘಾತ –21 ವರ್ಷದ ಯುವತಿ ದುರ್ಮರಣ


ಮಂಗಳೂರು;ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರೆ ಯುವತಿ ಸಾವನ್ನಪ್ಪಿದ್ದಾರೆ. ಬೈಕ್  ಸವಾರ ಗಾಯಗೊಂಡಿದ್ದು ಆಸ್ಪತ್ರೆ ಗೆ ದಾಖಲಿಸಲಾಗಿದೆ. ಈ  ಘಟನೆ ಶುಕ್ರವಾರ ಸಾಯಂಕಾಲ ಸಂಭವಿಸಿದೆ.

ಕೇರಳದ ಕಾಸರಗೋಡು ಕೊರಂಗಪತ್ತೂರು ನಿವಾಸಿ ಪ್ರೀತಿಕಾ ಶೆಟ್ಟಿ(21) ಸಾವನ್ನಪ್ಪಿದ ಯುವತಿ. ಬಂಟ್ವಾಳ ತಾಲೂಕು ಅರಂತೋಡಿ ಬಾಳೆಪುಣಿ ನಿವಾಸಿ ಮನ್ವಿತ್‌ ರಾಜ್‌ ಶೆಟ್ಟಿ (21) ಗಾಯಗೊಂಡ ಬೈಕ್ ಸವಾರ.

ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೈಕ್‌ಗೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ವಿಜಯ ಸನ್ನಿಧಿ ಬಳಿ ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಹೋಂಡಾ ಕಾರು ಡಿಕ್ಕಿಯಾಗಿದೆ.

ಅಪಘಾತದ ತೀವ್ರತೆಗೆ ಕಾರು ಬೈಕನ್ನು ದೂಡಿಕೊಂಡು ಹೋಗಿದ್ದು, ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಸಹಸವಾರ ಪ್ರೀತಿಕಾ ಶೆಟ್ಟಿ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗಲೇ ಸಾವನ್ನಪ್ಪಿದ್ದಾರೆ.

ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.  ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತಕ್ಕೀಡಾದ ಎರಡು ವಾಹನಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಪೊಲೀಸರು ಎಸಿಪಿ ಗೀತಾ ಕುಲಕರ್ಣಿ, ಇನ್‌ಸ್ಪೆಕ್ಟರ್ ಶರೀಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.