ಚೆನ್ನೈ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ವಿವಾದ ಹುಟ್ಟುಹಾಕಿದ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಹೇಳಿಕೆಯ ವಿರುದ್ಧ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿದೆ. ಸನಾತನ ಧರ್ಮ ಎಂಬುದು ಕರ್ತವ್ಯಗಳ ಗುಚ್ಛ. ಆದರೆ, ಜಾತೀಯತೆ ಹಾಗೂ ಅಸ್ಪೃಶ್ಯತೆ ಎಂಬ ಅಂಶಗಳನ್ನಷ್ಟೇ ವೈಭವೀಕರಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ತಮಿಳುನಾಡು ಮಾಜಿ ಸಿಎಂ ಅಣ್ಣಾದೊರೈ ಜನ್ಮದಿನಾಚರಣೆಯ ಸಂದರ್ಭ ಸನಾತನ ಧರ್ಮದ ವಿರುದ್ಧದ ಅಂಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ತಿರುವಿಕಾ ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಸುತ್ತೋಲೆ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್. ಶೇಷಸಾಯಿ ಅವರಿದ್ಧ ಪೀಠ ನಡೆಸಿತು.
ದೇಶದಲ್ಲಿ ಈಗ ನಡೆಯುತ್ತಿರುವ ಸನಾತನ ಧರ್ಮದ ಚರ್ಚೆಯ ಬಗ್ಗೆ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್, ಸನಾತನ ಧರ್ಮವು ಹಿಂದೂ ಜೀವನ ವಿಧಾನವನ್ನು ಅನುಸರಿಸುವವರಿಗೆ ರಾಷ್ಟ್ರ, ಪೋಷಕರು ಮತ್ತು ಗುರುಗಳ ಬಗ್ಗೆ ಕರ್ತವ್ಯಗಳನ್ನು ಒಳಗೊಂಡಂತೆ ವಿಧಿಸಲಾದ ಶಾಶ್ವತ ಕರ್ತವ್ಯಗಳ ಗುಚ್ಛ. ರಾಷ್ಟ್ರ, ಪೋಷಕರು ಹಾಗೂ ಗುರುಗಳ ಬಗ್ಗೆ ಎಂದಿಗೂ ಗೌರವ ಸನಾತನ ಧರ್ಮದಲ್ಲಿ ಕಡಿಮೆಯಾಗೋದಿಲ್ಲ.
ಇಂಥ ಕರ್ತವ್ಯಗಳನ್ನು ನಾಶಪಡಿಸಬೇಕೆನ್ನುವ ಮಾತುಗಳು ಬರುತ್ತಿರುವುದೇಕೆ ಎಂದು ಕೋರ್ಟ್ ಪ್ರಶ್ನಿಸಿದೆ. ಸನಾತನ ಧರ್ಮದ ಸುತ್ತಲಿನ ಚರ್ಚೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸನಾತನ ಧರ್ಮವು ಕೇವಲ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಆದರೆ, ಈ ಕಲ್ಪನೆಯನ್ನು ನ್ಯಾಯಾಧೀಶರು ವಿರೋಧಿಸಿದ್ದಾರೆ.
ಪ್ರತಿಯೊಂದು ಧರ್ಮವು ನಂಬಿಕೆಯ ಮೇಲೆ ಸ್ಥಾಪಿತವಾಗಿದೆ. ಆದ್ದರಿಂದ, ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ, ಅದು ದ್ವೇಷದ ಭಾಷಣವಾಗಿ ಬದಲಾಗಬಾರದು. ವಿಶೇಷವಾಗಿ ಅದು ಧರ್ಮದ ವಿಷಯಗಳಿಗೆ ಸಂಬಂಧಿಸಿದಂತೆ. ಇಂತಹ ಭಾಷಣದಿಂದ ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದ್ಧಾರೆ.