1 ಬಿಸ್ಕೆಟ್‌ಗಾಗಿ 1 ಲಕ್ಷ ರೂ ದಂಡ!- ಗ್ರಾಹಕ ನ್ಯಾಯಲಯದ ತೀರ್ಪು

 

ಚೆನ್ನೈ:  ನಗರದ ಗ್ರಾಹಕರ ನ್ಯಾಯಾಲಯ,  ಸಿಗರೇಟಿನಿಂದ ಹಿಡಿದು ಹೋಟೆಲ್ ಉದ್ಯಮದವರೆಗೆ ತೊಡಗಿಕೊಂಡಿರುವ  ಬೃಹತ್ ಸಂಸ್ಥೆ ITC ಗೆ ಒಂದು ಲಕ್ಷರೂ. ದಂಡ ವಿಧಿಸಿದೆ. ಇದಕ್ಕೆ ಕಾರಣವಾಗಿದ್ದು ಒಂದು ಬಿಸ್ಕೆಟ್ ವಿಚಾರ.

ಚೆನ್ನೈ ನಿವಾಸಿ ದಿಲ್ಲಿ ಬಾಬು ಎಂಬವರು 2021ರಲ್ಲಿ ಮನಾಲಿಗೆ ತೆರಳಿದ್ದಾಗ  ಬೀದಿ ನಾಯಿಗಳಿಗೆ ತಿನ್ನಿಸಲೆಂದು 2 ಡಜನ್ ಸನ್‌ ಫೀಸ್ಟ್ ಬಿಸ್ಕೆಟ್ ಪ್ಯಾಕೆಟ್ ಗಳನ್ನು ಖರೀದಿಸಿದ್ದರು. ಎಲ್ಲಾ ಪೊಟ್ಟಣಗಳಲ್ಲಿ ತಲಾ 16 ಬಿಸ್ಕೆಟ್ ಗಳಿದ್ದರೆ, ಒಂದರಲ್ಲಿ ಮಾತ್ರ 15 ಬಿಸ್ಕೆಟ್‌ ಗಳಿದ್ದವು. ಕವರ್‌ನಲ್ಲೂ 16 ಬಿಸ್ಕೆಟ್‌ಗಳಿವೆ ಎಂದು ಬರೆಯಲಾಗಿತ್ತು.

 ಇದರಿಂದ ಗೊಂದಲಕ್ಕೊಳಗಾದ ದಿಲ್ಲಿ ಬಾಬು ಅಂಗಡಿ ಮತ್ತು ITC ಸಂಸ್ಥೆಯ ಬಳಿ ಸ್ಪಷ್ಟಿಕರಣ ಕೇಳಿದರು. ಆದರೆ ಯಾರೊಬ್ಬರೂ  ಅವರಿಗೆ ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ. ಕಡೆಗೆ ಅವರು ಗ್ರಾಹಕರ ಈ ನ್ಯಾಯಾಲಯಕ್ಕೆ ದೂರು ನೀಡಿದರು. ವಿಚಾರಣೆ ಸಂದರ್ಭ ಐಟಿಸಿ ಸಂಸ್ಥೆ ಬಿಸ್ಕೆಟ್ ಪ್ಯಾಕೆಟ್‌ನ ಬೆಲೆ ಅದರ ತೂಕವನ್ನು ಅವಲಂಬಿಸಿದೆಯೇ ಹೊರತು ಬಿಸ್ಕೆಟ್ ಸಂಖ್ಯೆಗಳನ್ನಲ್ಲ ಎನ್ನುವ ಮೂಲಕ ನುಣುಚಿಕೊಳ್ಳಲು ಯತ್ನ ಮಾಡಿತ್ತು. 

ಈ ಸಂದರ್ಭದಲ್ಲಿ ನ್ಯಾಯಾಲಯದ ಆಣತಿಯಂತೆ ದೂರುದಾರ ನೀಡಿದ್ದ ಬಿಸ್ಕೆಟ್ ಪ್ಯಾಕೆಟ್ ಅನ್ನು ತೂಗಿ ನೋಡಲಾಯಿತು. ಆಗ ಅದರ ತೂಕದಲ್ಲಿ 2 ಗ್ರಾಂ ಕಡಿಮೆ ಇರುವುದು ಪತ್ತೆಯಾಗಿತ್ತು. ಇದೆಲ್ಲವನ್ನೂ ಪರಾಮರ್ಶಿಸಿ ಚೆನ್ನೈ ಗ್ರಾಹಕರ  ನ್ಯಾಯಾಲಯ ದೂರುದಾರರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ITC ಸಂಸ್ಥೆಗೆ ಆದೇಶಿಸಿ ತೀರ್ಪು ನೀಡಿದೆ. ಅಲ್ಲದೆ ಆ ಬ್ಯಾಚಿನ ಬಿಸ್ಕೆಟ್ ಪ್ಯಾಕೆಟ್ ಗಳ ಮಾರಾಟವನ್ನು ತಡೆಹಿಡಿಯಬೇಕೆಂದು ಸೂಚಿಸಿದೆ.

ITC ಸಂಸ್ಥೆ ದಿನಕ್ಕೆ 50 ಲಕ್ಷ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಉತ್ಪಾದಿಸುತ್ತದೆ. ಒಂದು ಬಿಸ್ಕೆಟ್ ಬೆಲೆ 75 ಪೈಸೆ. 'ಪ್ರತಿ ಪ್ಯಾಕೆಟ್‌ನಲ್ಲಿ 1 ಬಿಸ್ಕೆಟ್ ಕಡಿಮೆ ಮಾಡುವ ಮೂಲಕ ಸಂಸ್ಥೆ ದಿನಕ್ಕೆ ಏನಿಲ್ಲವೆಂದರೂ 29 ಲಕ್ಷ ರೂ.ಗಳನ್ನು ವಂಚಿಸಿರುವ ಸಾಧ್ಯತೆ ಇದೆ' ಎಂದು ದೂರುದಾರ ದಿಲ್ಲಿಬಾಬು  ತಿಳಿಸಿದ್ದಾರೆ.