ಪುತ್ರಿಯ ಜಾತಕದಲ್ಲಿ ಸಮಸ್ಯೆಯಿದೆ ಎಂದು ನಂಬಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ತಂದೆ
Monday, August 21, 2023
ಹೈದರಾಬಾದ್: 21ನೆಯ ಶತಮಾನದ ತಂತ್ರಜ್ಞಾನ ಯುಗದಲ್ಲೂ ಜನತೆ ಅಂಧಶ್ರದ್ಧೆಗಳ ದಾಸರಾಗುತ್ತಿದ್ದಾರೆ. ಇಲ್ಲೊಬ್ಬ ಪಾಪಿ ತಂದೆ ಪುತ್ರಿಯ ಜಾತಕ ಚೆನ್ನಾಗಿಲ್ಲ, ಮುಂದೆ ತೊಂದರೆಯಾಗುತ್ತದೆ ಎಂದು ಆಕೆಯನ್ನು ಬರ್ಬರವಾಗಿ ಕೊಂದಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮೋಕ್ಷಜ ಎಂಬ 8ವರ್ಷದ ಬಾಲಕಿಯೇ ಪಾಪಿ ತಂದೆಯ ಮೂಢನಂಬಿಕೆಗೆ ಬಲಿಯಾದವಳು.
ವಿಜಯವಾಡ ಮೂಲದ ಕುಂದೇಟಿ ಚಂದ್ರಶೇಖರ್ ಮತ್ತು ಹಿಮಬಿಂದು ದಂಪತಿಯ ಮೋಕ್ಷಜ ತಂದೆ - ತಾಯಿಯವರು. ಇಬ್ಬರೂ ಐಟಿ ಕಂಪೆನಿ ಉದ್ಯೋಗಿಗಳು. ಚಂದ್ರಶೇಖರ್ ಇತ್ತೀಚೆಗೆ ತನ್ನ ಕೆಲಸ ಕಳೆದುಕೊಂಡಿದ್ದನು. ತಾನು ಕೆಲಸ ಕಳೆದುಕೊಂಡಿದ್ದಕ್ಕೆ ಹೆಂಡತಿಯೇ ಕಾರಣ ಎಂದು ಆಕೆಯೊಂದಿಗೆ ಆಗಾಗ ಜಗಳ ತೆಗೆಯುತ್ತಿದ್ದ.
ಆದ್ದರಿಂದ ಪತ್ನಿ ಹಿಮಬಿಂದು ಪುತ್ರಿ ಮೋಕ್ಷಜಳನ್ನು ಕರೆದುಕೊಂಡು ಬಿಎಚ್‌ಇಎಲ್‌ನಲ್ಲಿರುವ ತನ್ನ ಊರಿಗೆ ಹೋಗಿ ವಾಸವಾಗಿದ್ದಳು. ಚಂದ್ರಶೇಖರ್ ವಾರಕ್ಕೆ ಎರಡು ಬಾರಿ ಪುತ್ರಿಯನ್ನು ಭೇಟಿಯಾಗುತ್ತಿದ್ದನು. ಪುತ್ರಿಯ ಜಾತಕದಲ್ಲಿ ಮುಂದೆ ಆಕೆ ಕಷ್ಟಗಳನ್ನು ಅನುಭವಿಸುತ್ತಾಳೆ ಎಂದುಕೊಂಡು ಆಕೆ ಕಷ್ಟಪಡಬಾರದೆಂದು ಪುತ್ರಿಯ ಕೊಲೆಗೆ ಸ್ಕೇಚ್ ಹಾಕಿದ್ದಾನೆ.
ಆ.18ರಂದು ಸಂಜೆ ಕಾರಿನಲ್ಲಿ ಮೋಕ್ಷಜಾಳನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಎಷ್ಟು ಹೊತ್ತಾದರೂ ಪುತ್ರಿ ಶಾಲೆ ಮುಗಿಸಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಸ್ಥರು ಚಂದ್ರಶೇಖರ್ ಗೆ ಕರೆ ಮಾಡಿದ್ದಾರೆ. ಮಗು ಮಲಗಿದೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಮೃತದೇಹವನ್ನು ಬಿಸಾಡಲು ಜಾಗ ಹುಡುಕುತ್ತಿದ್ದನು. ಇದೇ ವೇಳೆ ರಾತ್ರಿ 10:30ರ ಸುಮಾರಿಗೆ ಕಾರಿನ ಟೈರ್ ಒಡೆದು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿಯೇ ಇದ್ದವರು ಕಾರಿನಲ್ಲಿ ಮಗುವಿನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.