ರಷ್ಯಾದಿಂದ ಅಕ್ಕನ ಮನೆಗೆ ರಜೆಗೆ ಬಂದಿದ್ದಾತ ಅರೆಸ್ಟ್: ಅನ್ಯಕೋಮಿನ ಯುವಕನೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವತಿಗೆ ನಿಂದನೆ

ಬೆಂಗಳೂರು: ರಷ್ಯಾದಲ್ಲಿ ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದ ಯುವಕನೊಬ್ಬ ರಜೆಯ ಮೇಲೆ ಭಾರತಕ್ಕೆ ಬಂದು ಬೇರೆಯವರ ವಿಚಾರಕ್ಕೆ ಮೂಗು ತೂರಿಸಿ ಈಗ ಪೊಲೀಸ್  ಅತಿಥಿಯಾಗಿದ್ದಾನೆ. ಅಂದಹಾಗೆ ಯುವತಿಯ ನಿಂದನೆ ಮಾಡಿದ್ದೇ ಈತನಿಗೆ ಉರುಳಾಯ್ತು.

ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದ್ದು, ಆ ಬಳಿಕ ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ. ಅನ್ಯಧರ್ಮೀಯನೊಂದಿಗೆ ಹೋಗುತ್ತಿದ್ದಕ್ಕೆ ನಿಂದಿಸಿರುವ ವೀಡಿಯೋವನ್ನು ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದರು. ಸದ್ಯ ಸೆನ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಜಾಕೀರ್ ಎಂಬಾತ ಬಂಧಿತ ಆರೋಪಿ. ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಆರೋಪಿ ಜಾಕೀರ್ ಅಹಮದ್ ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಈತ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಗೋವಿಂದಪುರದ ತನ್ನ ಅಕ್ಕನ ಮನೆಗೆ ಬಂದಿದ್ದ. ಆಗ ಈತ ಅನ್ಯಧರ್ಮಿಯ ಯುವಕನೊಂದೊಗೆ ಬುರ್ಖಾ ಧರಿಸಿದ ಯುವತಿ ಹೋಗುತ್ತಿರುವುದನ್ನು ಕಂಡಿದ್ದಾನರ. ಆದ್ದರಿಂದ ಅವರ ಬೈಕ್ ಅಡ್ಡಗಟ್ಟಿರುವ ಈತ ಯುವತಿಯೊಂದಿಗೆ ಗಲಾಟೆ ಮಾಡಿ ಯುವತಿಯನ್ನು ನಿಂದಿಸಿದ್ದಾನೆ. ಈ ಸಂದರ್ಭ ಬುರ್ಖಾ ತೆಗೆಯುವಂತೆ ಆತ ಯುವತಿಯನ್ನು ಕೆಟ್ಟದಾಗಿ ನಿಂದಿಸಿದ್ದಾನೆ. ಆದರೆ ಯುವತಿ ಮತ್ತು ಬೈಕ್ ನಲ್ಲಿದ್ದ ಯುವಕ ಇಬ್ಬರೂ ಪರಿಚಿತರಾಗಿದ್ದರು. ಇಬ್ಬರೂ ಕಂಪನಿಯೊಂದರ ಇಂಟರ್ ವ್ಯೂಗೆ ಹೋಗುತ್ತಿದ್ದರು.

ವಾಪಾಸ್ ಬರುವಾಗ ಯುವತಿಯನ್ನು ಬೈಕ್ ನಲ್ಲಿ ಮನೆಗೆ ಡ್ರಾಪ್ ಮಾಡಲು ಯುವಕ ತೆರಳುತ್ತಿದ್ದ. ಸದ್ಯ ಯುವತಿಗೆ ನಿಂದಿಸಿದ ಜಾಕೀರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.