ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ಭಾರತೀಯ ಕುಟುಂಬದ ನಾಲ್ವರ ದುರ್ಮರಣ

ವಿಜಯವಾಡ: ಆಂಧ್ರಪ್ರದೇಶದ ಅನಿವಾಸಿ ಕುಟುಂಬದ ದಂಪತಿ ಸೇರಿದಂತೆ ಮಕ್ಕಳಿಬ್ಬರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಸೌದಿ ಅರೇಬಿಯಾದ ರಿಯಾದ್ ಬಳಿ ನಡೆದಿದೆ.

ಕುವೈತ್ ನಲ್ಲಿ ಉದ್ಯೋಗಿಯಾಗಿರುವ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ದಂಡು ಗೌಸ್ ಬಾಷಾ, ಅವರ ಪತ್ನಿ ತಬಾರಕ್ ಸರ್ವಾರ್ (31) ಹಾಗೂ ಇಬ್ಬರು ಪುತ್ರರಾದ ಎಶಾನ್ (4) ಮತ್ತು ದಮೀಲ್ (3)  ಮೃತಪಟ್ಟವರು.

ದಂಡು ಗೌಸ್ ಬಾಷಾ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸೌದಿ ಅರೇಬಿಯಾಕ್ಕೆ ತೆರಳಿದ್ದರು.‌ಅಲ್ಲಿಂದ ಮತ್ತೆ ಅವರು ಕುವೈತ್ ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಬಾಷಾ ಚಲಾಯಿಸುತ್ತಿದ್ದ ಕಾರು, ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡಿದೆ ಈ ದುರ್ಘಟನೆ ಸಂಭವಿಸಿ ಎಂದು ವರದಿಯಾಗಿದೆ.

ಗೌಸ್ ಬಾಲಕರಾಗಿದ್ದಾಗಲೇ ಅವರ ಕುಟುಂಬವು ಬೆಂಗಳೂರಿಗೆ ವಲಸೆ ಹೋಗಿತ್ತು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದ ಬಳಿಕ, 2009ರಲ್ಲಿ ಇಂಜಿನಿಯರಿಂಗ್ ಪದವಿಯನ್ನು ಚೆನ್ನೈನಲ್ಲಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಿದ್ದರು. ವ್ಯಾಸಂಗ ಪೂರ್ಣಗೊಂಡ ನಂತರ ಪುಣೆಯಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಡಾಟಾಬೇಸ್ ಅಡ್ಮಿನಿಸ್ಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬಳಿಕ ಅವರು, 2019ರಲ್ಲಿ ಲಂಡನ್ನಿನ ಆಂಗ್ಲಿಯಾ ರಸ್ಕಿನ್ ವಿಶ್ವವಿದ್ಯಾಲಯದಲ್ಲಿ ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಇದಾದ ನಂತರ ಕುವೈತ್ ಗೆ ತೆರಳಿದ ಗೌಸ್, ಹಲವಾರು ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

ಸುಮಾರು 10 ದಿನಗಳ ಹಿಂದೆ ತಾವು ಖರೀದಿಸಿದ್ದ ನೂತನ ಕಾರಿನೊಂದಿಗೆ ಸೌದಿ ಅರೇಬಿಯಾದ ಮಕ್ಕಾಗೆ ಭೇಟಿ ನೀಡಲು ತಮ್ಮಪತ್ನಿ, ಪುತ್ರರೊಂದಿಗೆ ಗೌಸ್ ತೆರಳಿದ್ದರು. ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿ, ಮದೀನಾಕ್ಕೆ ಭೇಟಿ ನೀಡಿದ ನಂತರ ಅವರ ಕುಟುಂಬವು ಕುವೈತ್ ನಲ್ಲಿನ ತಮ್ಮ ನಿವಾಸಕ್ಕೆ ಹಿಂದಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ರಿಯಾದ್ ನಿಂದ ಸುಮಾರು 120 ಕಿಮೀ ದೂರದಲ್ಲಿರುವ ಹಫ ತುವಾಖ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯ ಸಂಗತಿ ತಿಳಿದು ಆಘಾತಕ್ಕೀಡಾಗಿರುವ ಗೌಸ್ ಪೋಷಕರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.

ಮೃತದ ಅವಶೇಷಗಳನ್ನು ತಾಯ್ತಾಡಿಗೆ ಮರಳಿಸಲು ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಆಂಧ್ರಪ್ರದೇಶ ಅನಿವಾಸಿ ತೆಲುಗು ಸಮಾಜವು ಸಮನ್ವಯ ಕಾರ್ಯ ನಡೆಸುತ್ತಿದೆ ಎಂದೂ ರಮಣ ರೆಡ್ಡಿ ತಿಳಿಸಿದ್ದಾರೆ.