-->
1000938341
ಮಹಿಳಾ ಪೊಲೀಸರಿಗೆ 300 ಬಾರಿ‌‌ಕರೆ ಮಾಡಿ ಕಿರುಕುಳ ನೀಡಿದ ಆರೋಪಿಗೆ 3 ವರ್ಷ ಕಾರಾಗೃಹ ಶಿಕ್ಷೆ

ಮಹಿಳಾ ಪೊಲೀಸರಿಗೆ 300 ಬಾರಿ‌‌ಕರೆ ಮಾಡಿ ಕಿರುಕುಳ ನೀಡಿದ ಆರೋಪಿಗೆ 3 ವರ್ಷ ಕಾರಾಗೃಹ ಶಿಕ್ಷೆ


ಕೊಚ್ಚಿ: ಮಹಿಳಾ ಪೊಲೀಸ್​ ಅಧಿಕಾರಿಗಳಿಗೆ ನಿರಂತರ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

ಶಿಕ್ಷೆಗೊಳಗಾಗಿರುವ ಆರೋಪಿ ಕೇರಳ ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಆರಂಭಿಸಿರುವ ವನಿತಾ ಸಹಾಯವಾಣಿಗೆ 300ಕ್ಕೂ ಅಧಿಕ ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದ ಎಂದು ವರದಿಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫೋನ್​ ಟ್ರೇಸ್​ ಮಾಡಿ ಆರೋಪಿಯನ್ನು ಬಂಧಿಸಿದ್ದರು.

ಜುಲೈ 11, 2019ರಂದು ಜೋಸ್​ ಎಂಬಾತ ವನಿತಾ ಸಹಾಯವಾಣಿಗೆ ಕರೆ ಮಾಡಿ ಮಹಿಳಾ ಪೊಲೀಸ್​ ಅಧಿಕಾರಿಗಳೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾನೆ.  ಮಾರನೆಯ ದಿನವೂ ಇದೇ ವರ್ತನೆಯನ್ನು ಆತ ಮುಂದುವರೆಸಿದ್ದಾನೆ. ಮಹಿಳಾ ಅಧಿಕಾರಿಗಳು ಆತನಿಗೆ ತಿರುಗೇಟು ನೀಡಿದ ಬಳಿಕ ಕರೆ ಕಟ್​ ಮಾಡುತ್ತಿದ್ದ.

ಆದರೆ ಈತ ಈ ಎರಡು ದಿನಗಳ ಅವಧಿಯಲ್ಲಿ 300 ಬಾರಿ ಕರೆ ಮಾಡಿದ್ದಾನೆ. ಆರೋಪಿಯ ಈ ವರ್ತನೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಕಾಲ್​ ಹಿಸ್ಟರಿ ಟ್ರೇಸ್​ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಜೋಸ್​ ಬಂಧನವನ್ನು ಪ್ರಶ್ನಿಸಿ ಆತನ ಸ್ನೇಹಿತರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಹಲವು ಸುತ್ತಿನ ವಿಚಾರಣೆ, ದಾಖಲೆಗಳ ಪರಿಶೀಲನೆ, ವಾದ-ಪ್ರತಿವಾದವನ್ನೂ ಸುದೀರ್ಘವಾಗಿ ಆಲಿಸಿದ ನ್ಯಾಯಲಯ ಮಹಿಳಾ ಪೊಲೀಸರಿಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿರುವುದು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಮನಾಗಿದೆ. ಮಹಿಳಾ ಪೊಲೀಸರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಇಂತಹ ಕಿಡಿಗೇಡಿಗಳು ಅಡ್ಡಿಯಾಗಿದ್ದಾರೆ.

ಪೊಲೀಸರಿಗೆ ಈ ರೀತಿಯಾದರೆ ಸಾಮಾನ್ಯ ಮಹಿಳೆಯರ ಗತಿಯೇನು. ವನಿತಾ ಸಹಾಯವಾಣಿಗೆ ಕರೆ ಮಾಡಿ ಮಹಿಳಾ ಪೊಲೀಸರ ಜೊತೆ ಅಸಭ್ಯವಾಗಿ ಮಾತನಾಡಿದ ಆರೋಪಿ ಜೋಸ್​ಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ. ದಂಡವನ್ನೂ ವಿಧಿಸಿ ನ್ಯಾಯಾಲಯ ತೀರ್ಪನ್ನು ನೀಡಿದೆ.

Ads on article

Advertise in articles 1

advertising articles 2

Advertise under the article