ಆಗಸ್ಟ್ 25 ರಿಂದ ರಾಜ್ಯಾದ್ಯಂತ ಮಾರಿ ಹಬ್ಬ - ಟ್ರೇಲರ್‌ನಲ್ಲೇ ಮೋಡಿ ಮಾಡಿದ "ಟೋಬಿ"


"ಒಂದು ಮೊಟ್ಟೆಯ ಕಥೆ" ಎಂಬ ಸರಳವಾದ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದ ರಾಜ್ ಬಿ ಶೆಟ್ಟಿ, "ಗರುಡ ಗಮನ ವೃಷಭ ವಾಹನ' ಎಂಬ ಚಿತ್ರದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಜನಮೆಚ್ಚುಗೆ ಗಳಿಸಿದ್ದರು. ಈಗ ಅದೇ ತಂಡದೊಂದಿಗೆ ಟೋಬಿ ಎನ್ನುವ ಅದ್ಧೂರಿ ವೆಚ್ಚ‌ದ ಸಿನಿಮಾ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರ ಮನ ಗೆದ್ದಿದೆ. ಈ  ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 5 ಮಿಲಿಯನ್ ವೀಕ್ಷಣೆಯನ್ನು ದಾಟಿ ಮುನ್ನುಗ್ಗುತ್ತಿದೆ.

ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಟೋಲಿ ಚಿತ್ರದ ಬರಹಗಾರ ರಾಜ್ ಬಿ ಶೆಟ್ಟಿ ಜೊತೆಗೆ ಚೈತ್ರ ಜೆ ಆಚಾರ್, ರಾಜ್ ದೀಪಕ್ ಶೆಟ್ಟಿ, ಯತೀಶ್ ಬೈಕಂಪಾಡಿ, ನಿರ್ಮಾಪಕರಾದ ರವಿ ರೈ ಕಳಸ ಜೊತೆಗೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು. 

ಚಿತ್ರದ ಬಗ್ಗೆ ಮಾತನಾಡಿದ ರಾಜ್ ಬಿ ಶೆಟ್ಟಿ `ಟೋಬಿ' ನನ್ನೊಬ್ಬನ ಚಿತ್ರವಲ್ಲ, ನನ್ನ ಇಡೀ  ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ.  ನನಗೆ ಇಂದು  ಖುಷಿಯಾಗಿರುವುದು ಬೇರೆ ಚಿತ್ರತಂಡದವರು ಒಂದು ನಮ್ಮ ಚಿತ್ರಕ್ಕೆ ಪ್ರಮೋಷನ್ ಮಾಡುತ್ತಿರುವುದು.  "ಹಾಸ್ಟೆಲ್ ಹುಡುಗರು" ತಂಡ ಹಾಗೂ ನಮ್ಮ ಚಿತ್ರ ಬಿಡುಗಡೆಯಾಗಿ ಒಂದೇ ವಾರಕ್ಕೆ ರಕ್ಷಿತ್‌ ಶೆಟ್ಟಿ  "ಸಪ್ತ ಸಾಗರದಾಚೆ ಎಲ್ಲೋ" ಚಿತ್ರ ಬಿಡುಗಡೆಯಾಗುತ್ತಿದೆ. ಇವರಿಬ್ಬರೂ ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆ.  ಇದು ಮುಂದುವರೆಯಲಿ. ನಮ್ಮ ಚಿತ್ರ ಆಗಸ್ಟ್ 25 ರಂದು ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದರು ರಾಜ್ ಬಿ ಶೆಟ್ಟಿ.

ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿಯ ಜೊತೆಗೆ ಚೈತ್ರ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಮತ್ತು ಇನ್ನಷ್ಟು ಕಲಾವಿದರ ತಾರಾಬಳಗವಿದ್ದು, ಬಾಸಿಲ್ ಅಲ್ಚಾ ಲಕ್ಕಲ್ ನಿರ್ದೇಶನ ಮಾಡಿದ್ದಾರೆ. ಮಿಥುನ್ ಮುಕುಂದನ್ ಅವರ ಹಿನ್ನಲೆ ಸಂಗೀತ, ಮತ್ತು ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ ಟ್ರೈಲರ್‌ಗೆ ಮತ್ತಷ್ಟು ಕೌತುಕತೆಯನ್ನು ನೀಡಿವೆ.

ಚಿತ್ರವನ್ನು ಲೈಟರ್ ಬುದ್ಧ ಫಿಲಮ್ಸ್, ಆಗಸ್ಟ್ ಫಿಲಮ್ಸ್, ಕಾಫೀ ಗ್ಯಾಂಗ್ ಸ್ಟುಡಿಯೋ ಮತ್ತು ಸ್ಮೂತ್ ಸೈಲರ್ಸ್‌ ಜಂಟಿಯಾಗಿ ನಿರ್ಮಿಸಿದ್ದು ಇದೇ ಆಗಸ್ಟ್ 25 ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.