ಚೆನ್ನೈ: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುತ್ರನ ಸಾವಿನಿಂದ ನೊಂದ ಆತನ  ಆತನ ತಂದೆ ಅದರ ಮರುದಿನವೇ ಮೃತದೇಹವಾಗಿ ಪತ್ತೆಯಾಗಿರುವ ಪ್ರಕರಣ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಜಗದೀಶ್ವರನ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. 2022ರಲ್ಲಿ ಪಿಯುಸಿಯಲ್ಲಿ 427 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ. ಆದರೆ ಈತ ಎರಡು ಸಲ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಬರೆದರೂ ಪಾಸ್ ಆಗಿರಲಿಲ್ಲ. ಆದ್ದರಿಂದ ನೊಂದ ಈತ ಶನಿವಾರ ಮನೆಯಲ್ಲಿಯೇ ಆತ್ಮಹತ್ಯೆ ಶರಣಾಗಿದ್ದಾನೆ.
ಪುತ್ರಶೋಕದಲ್ಲಿದ್ದ ತಂದೆ ಸೆಲ್ವಶೇಖರ್, ಆ ನೋವಿನಿಂದ ಹೊರಬರಲಾಗದೆ ನೊಂದು ಮರುದಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ಸೂಚಿಸಿದ್ದು, ಯುವಪೀಳಿಗೆ ಆತ್ಮಹತ್ಯೆಯ ಯೋಚನೆ ಮಾಡಬಾರದು, ಆತ್ಮವಿಶ್ವಾಸದೊಂದಿಗೆ ಬದುಕಬೇಕು ಎಂದು ಕಿವಿಮಾತು ಹೇಳಿದ್ದಾರೆ.
 
 
 
 
 
 
 
 
 
 
 
 
 
 
 
 
 
 
 
