ಕಾಲೇಜು ಶೌಚಾಲಯದಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯರ ಖಾಸಗಿ ದೃಶ್ಯ ಚಿತ್ರೀಕರಣ : ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಅಮಾನತು

ಉಡುಪಿ: ಇಲ್ಲಿನ ಖಾಸಗಿ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಗುಪ್ತವಾಗಿ ಮೊಬೈಲ್ ಇಟ್ಟು ಅನ್ಯಕೋಮಿನ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಿಸುತ್ತಿದ್ದ ಆರೋಪದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ.

ಉಡುಪಿಯ ಅಂಬಲಪಾಡಿ ಬೈಪಾಸ್ ಬಳಿಯಿರುವ ನೇತ್ರ ಜ್ಯೋತಿ ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಮಹಿಳಾ ಶೌಚಾಲಯದಲ್ಲಿ ಮೊಬೈಲ್‌ ಅಡಗಿಸಿಟ್ಟು ಅನ್ಯಕೋಮಿನ ವಿದ್ಯಾರ್ಥಿನಿಯರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಆ ವಿಡಿಯೋಗಳನ್ನು ತಮ್ಮ ಕೋಮಿನ ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋಗಳನ್ನು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದರು ಎನ್ನಲಾಗಿದೆ. ಕೃತ್ಯ ಬೆಳಕಿಗೆ ಬಂದ ತಕ್ಷಣ ಉಳಿದ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡಿದ್ದು ಕಾಲೇಜಿನಲ್ಲಿ ದೊಡ್ಡ ಜಗಳವೇ ನಡೆದಿತ್ತು.

ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾದ ಮೂವರು ವಿದ್ಯಾರ್ಥಿನಿಯರ ಜೊತೆಗೆ ಇತರ ವಿದ್ಯಾರ್ಥಿನಿಯರು ವಾಗ್ವಾದ ನಡೆಸಿದ್ದಾರೆ. ಅಲ್ಲದೆ, ಈ ಬಗ್ಗೆ ಕಾಲೇಜು ಆಡಳಿತಕ್ಕೂ ದೂರು ನೀಡಿದ್ದರು. ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರನ್ನು  ಅಮಾನತುಗೊಳಿಸಿದೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಕಾಲೇಜಿಗೆ ತೆರಳಿದ್ದ ಹಿಂದೂ ಸಂಘಟನೆಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ. ಆದರೆ ಕಾಲೇಜು ಆಡಳಿತ ಮಂಡಳಿ ಇದುವರೆಗೂ ಪೊಲೀಸ್ ದೂರನ್ನೇ ದಾಖಲಿಸಿಲ್ಲ. ಆದ್ದರಿಂದ ಸರ್ವ ಕಾಲೇಜು ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ತನಿಖೆ ಒತ್ತಾಯಿಸಿ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಅವರಿಗೆ ಮನವಿ ಸಲ್ಲಿಸಿದ್ದಾರೆ.