ಪ್ರಿಯತಮೆಯೋ, ಪಾಕಿಸ್ತಾನದ ಏಜೆಂಟೋ? ಸೀಮಾ ನಡೆಯ ಬಗ್ಗೆ ಅನುಮಾನ


ನವದೆಹಲಿ: ಪ್ರಿಯಕರನನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ ಮೇಲೆ ಇತ್ತೀಚೆಗೆ ಅನುಮಾನಗಳು ಮೂಡಲಾರಂಭಿಸಿದೆ. ಈಕೆ ನಿಜವಾಗಿಯೂ ಪ್ರೀತಿಯನ್ನು ಅರಸಿ ಬಂದಿದ್ದಾಳೆಯೇ? ಅಥವಾ ಪಾಕಿಸ್ತಾನದ ಏಜೆಂಟ್​ ಆಗಿರಬಹುದೇ? ಎಂಬ ಸಂಶಯ ದಟ್ಟವಾಗುತ್ತಿದೆ. ಆಕೆಯ ನಡೆ ದಿನದಿಂದ ದಿನಕ್ಕೆ ನಿಗೂಢತೆಯನ್ನು ಹೆಚ್ಚಿಸುತ್ತಿದೆ. ಇದರ ನಡುವೆ ಜು.18ರಂದು ಉತ್ತರಪ್ರದೇಶದ ಭಯೋತ್ಪಾದನಾ ವಿರೋಧಿ ಪಡೆ ಸೀಮಾಳನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಜು.17ರಂದು 8 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.‌ ಆಗ ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಕುರಿತು ಕೆಲವು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. 

ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಎಂಬ ಯುವಕನ ಪ್ರೀತಿಯ ಬಲೆಗೆ ಬಿದ್ದು ಆತನಿಗಾಗಿ ಬಂದಿರುವುದಾಗಿ ಸೀಮಾ ಹೇಳಿಕೊಳ್ಳುತ್ತಿದ್ದಾಳೆ. ಈಕೆ ತನ್ನ ಹೆಸರಿನಲ್ಲಿ ಅನೇಕ ಪಬ್​ಜಿ ಖಾತೆಗಳನ್ನು ಹೊಂದಿದ್ದು, ಈ ಹಿಂದೆಯೂ ಈಕೆ ದೆಹಲಿ ಮೂಲದ ಅನೇಕ ಯುವಕರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಆಕೆಯ ಪಾಕಿಸ್ತಾನಿ ಗುರುತಿನ ಚೀಟಿ ತೀರಾ ಇತ್ತೀಚಿನದು. 2022ರಲ್ಲಿ ಅದನ್ನು ಮಾಡಲಾಗಿದೆ. ಕೆಲವು ಇಂಗ್ಲಿಷ್​ ಸಾಲುಗಳನ್ನು ಓದಲು ತನಿಖಾಧಿಕಾರಿಗಳು ಹೇಳಿದಾಗ, ಆಕೆ ಸ್ಪಷ್ಟವಾಗಿ ಮತ್ತು ಹರಳು ಹುರಿದಂತೆ ಪಟಪಟನೆ ಓದಿದ್ದಾಳೆ. ಆದರೆ, ತಾನು ಐದನೇ ತರಗತಿ ಮಾತ್ರ ಓದಿದ್ದೇನೆ ಎಂದು ಸೀಮಾ ಈ ಹಿಂದೆ ಹೇಳಿಕೊಂಡಿದ್ದಾಳೆ. ಕೆಲವು ವರದಿಗಳ ಪ್ರಕಾರ, ಸೀಮಾ ಹೈದರ್​ ನ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿದ್ದಾನೆಂದು ತಿಳಿದುಬಂದಿದೆ. ಅಲ್ಲದೆ, ಆಕೆಯ ಸಹೋದರ ಸೇನೆ ಸೇರಲು ತಯಾರಿ ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.

ಸೀಮಾ, ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ವಿಚಾರದಲ್ಲಿ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಳೆದ ಮೇ ತಿಂಗಳಿನಲ್ಲಿ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಕಠ್ಮಂಡುವಿನಿಂದ ದೆಹಲಿಗೆ ಬಸ್‌ನಲ್ಲಿ ಪ್ರಯಾಣಿಸಿ, ಅಲ್ಲಿಂದ ಗ್ರೇಟರ್​ ನೋಯ್ಡಾಗೆ ಬಂದು ತನ್ನ ಪ್ರಿಯಕರನ್ನು ಸೇರಿದ್ದಾಳೆ. ಸೀಮಾ ಮತ್ತು ಸಚಿನ್ ಮೀನಾ 2019 ರಲ್ಲಿ PUBG ಆಡುವಾಗ ಮೊದಲು ಪರಿಚಯವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸೀಮಾ ಭಾರತಕ್ಕೆ ಬಂದ ಬಳಿಕ ಪಶುಪತಿನಾಥ ದೇವಸ್ಥಾನದಲ್ಲಿ ಇಬ್ಬರು ವಿವಾಹವಾದೆವು ಎಂದು ಸಚಿನ್​ ಹೇಳಿಕೆ ನೀಡಿದ್ದಾನೆ. ಮೀನಾ ಕುಟುಂಬವು ಸೀಮಾಳೊಂದಿಗೆ ಆಕೆಯ ನಾಲ್ವರು ಮಕ್ಕಳನ್ನು ಒಪ್ಪಿಕೊಂಡು ತಮ್ಮ ಜತೆ ಇರಿಸಿಕೊಂಡಿದ್ದಾರೆ.

ಜುಲೈ 4ರಂದು ಗ್ರೇಟರ್ ನೋಯ್ಡಾ ಪೊಲೀಸರು ಸೀಮಾ, ಸಚಿನ್ ಮತ್ತು ಸಚಿನ್ ಅವರ ತಂದೆಯನ್ನು ಬಂಧಿಸಿದ್ದರು. ಆದರೆ, ಜುಲೈ 7ರಂದು ಮೂವರಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ.