ವೆಂಕಟಗಿರಿ ಪಟ್ಟಣ: ಸೀಮಾ ಹೈದರ್ ತನ್ನ ಪ್ರೇಮಿಯನ್ನು ಅರಸಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಬಳಿಕ ಗಡಿ ಮೀರಿದ, ದೇಶ ಮೀರಿದ ಪ್ರೀತಿ - ಪ್ರೇಮಗಳ ಕಥೆಗಳು ಸರಣಿಯಂತೆ ಬೆಳಕಿಗೆ ಬರುತ್ತಿದೆ.
ಸೀಮಾ ಹೈದರ್ ಪ್ರಕರಣದ ಬಳಿಕ, ಭಾರತದ ರಾಜಸ್ಥಾನದಲ್ಲಿ ನೆಲೆಸಿದ್ದ ಅಂಜು, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ಪ್ರಿಯಕರನನ್ನು ಅರಸಿಕೊಂಡು ತೆರಳಿದ್ದಾಳೆ. ಆಕೆ ತಾನು ನಸ್ರುಲ್ಲಾನನ್ನು ವಿವಾಹವಾಗಿಲ್ಲವೆಂದು ತನ್ನ ತಂದೆಗೆ ವಿಡಿಯೋ ಕರೆ ಮಾಡಿ ತಿಳಿಸಿದ್ದಾಳೆ. ಆದರೆ ಆನ್ಲೈನ್ನಲ್ಲಿ ಹರಿದಾಡುತ್ತಿರುವ ಫೋಟೊಗಳು ನೋಡಿದಾಗ ಅವರದ್ದು, ಕೇವಲ ಸ್ನೇಹ ಮಾತ್ರವಲ್ಲ ಎನ್ನುವ ಅನುಮಾನ ಮೂಡುತ್ತಿದೆ. ಇದೀಗ ಅದೇ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಭಾರತಕ್ಕೆ ಬಂದಿದ್ದು ಶ್ರೀಲಂಕಾದ ಯುವತಿ.
ಶ್ರೀಲಂಕಾದ ಯುವತಿ ಶಿವಕುಮಾರಿ ವಿಘ್ನೇಶ್ವರಿ (25) ತನ್ನ ಫೇಸ್‌ಬುಕ್ ಸ್ನೇಹಿತ, ಚಿತ್ತೂರು ಜಿಲ್ಲೆಯ ಯುವಕ ಲಕ್ಷ್ಮಣ್ (28) ಎಂಬಾತನೊಂದಿಗೆ ಆರು ವರ್ಷಗಳಿಂದ ಸಂಪರ್ಕದಲ್ಲಿದ್ದಳು. ಈ ಸ್ನೇಹವು ಪ್ರೇಮಕ್ಕೆ ತಿರುಗಿದೆ. ಆದ್ದರಿಂದ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಶಿವಕುಮಾರಿ, ಭಾರತಕ್ಕೆ ಬಂದಿದ್ದಾಳೆ. ಪ್ರವಾಸಿ ವೀಸಾದಲ್ಲಿ ಬಂದಿರುವ ಆಕೆ, ತನ್ನ ಪ್ರಿಯತಮ ಲಕ್ಷ್ಮಣನನ್ನು ವಿವಾಹವಾಗಿದ್ದಾಳೆ.
ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಸುದ್ದಿ ವೈರಲ್ ಆಗಿದೆ. ಇದು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಆಗಸ್ಟ್ 15ರಂದು ಆಕೆಯ ವೀಸಾ ಅವಧಿ ಮುಗಿಯುವ ಅವಧಿಯ ಮೊದಲು ದೇಶವನ್ನು ತೊರೆಯುವಂತೆ ಅಥವಾ ವೀಸಾ ವಿಸ್ತರಣೆಯನ್ನು ಕೋರುವಂತೆ ಸೂಚಿಸಿದ್ದಾರೆ.
ಶಿವಕುಮಾರಿ, ಜುಲೈ 8ರಂದು ಆಂಧ್ರಪ್ರದೇಶಕ್ಕೆ ಬಂದಿದ್ದು, ಪ್ರೇಮಿಗಳಿಬ್ಬರೂ ಜುಲೈ 20ರಂದು ಚಿತ್ತೂರು ಜಿಲ್ಲೆಯ ವಿ ಕೋಟದಲ್ಲಿರುವ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ವಿ ಕೋಟ ಮಂಡಲದ ಅರಿಮಾಕುಲಪಲ್ಲಿಯ ಮೇಸ್ತ್ರಿ ಲಕ್ಷ್ಮಣ್ ಗೆ 2017 ರಲ್ಲಿ ಶ್ರೀಲಂಕಾದ ಶಿವಕುಮಾರಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ವಿಘ್ನೇಶ್ವರಿ ಜುಲೈ 8ರಂದು ಕೊಲಂಬೊದಿಂದ ಪ್ರವಾಸಿ ವೀಸಾದಲ್ಲಿ ಚೆನ್ನೈ ತಲುಪಿದರು. ಆಕೆಯನ್ನು ಬರಮಾಡಿಕೊಳ್ಳಲು ಲಕ್ಷ್ಮಣ ಚೆನ್ನೈಗೆ ಹೋಗಿದ್ದು ಬಳಿಕ ಆಕೆಯನ್ನು ಮನೆಗೆ ಕರೆತಂದಿದ್ದ. ಲಕ್ಷ್ಮಣ್ ಅವರ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಜುಲೈ 20ರಂದು ಅವರಿಬ್ಬರೂ ವಿವಾಹವಾದರು.
ಅಲ್ಲದೆ ಭಾರತೀಯ ಪ್ರಜೆಯಾಗಲು ಶಿವಕುಮಾರಿ ಯೋಜನೆ ರೂಪಿಸಿಕೊಂಡಿದ್ದಾರೆ. ಆದರೆ ಚಿತ್ತೂರು ಜಿಲ್ಲಾ ಪೊಲೀಸರು ದಂಪತಿಯನ್ನು ತಮ್ಮ ಮುಂದೆ ಹಾಜರುಪಡಿಸುವಂತೆ ಸೂಚಿಸಿದ್ದರಿಂದ ದಂಪತಿಯ ಸಂತಸ ಕೆಲಕಾಲ ಮರೆಯಾಗಿತ್ತು. ಚಿತ್ತೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೈರಿಶಾಂತ್ ರೆಡ್ಡಿ, ಶಿವಕುಮಾರಿ ಅವರ ವೀಸಾ ಅವಧಿ ಆಗಸ್ಟ್ 15ರಂದು ಮುಕ್ತಾಯವಾಗಲಿದ್ದು, ಅಷ್ಟರೊಳಗೆ ಆಕೆ ಶ್ರೀಲಂಕಾಕ್ಕೆ ಮರಳಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಶಿವಕುಮಾರಿ ತನ್ನ ದೇಶಕ್ಕೆ ಮರಳಲು ನಿರಾಕರಿಸಿದ್ದು ಭಾರತ ಸರ್ಕಾರವು ತನ್ನ ಪತಿಯೊಂದಿಗೆ ವಾಸಿಸಲು ಶಾಶ್ವತವಾಗಿ ದೇಶದಲ್ಲಿ ಉಳಿಯಲು ವ್ಯವಸ್ಥೆ ಮಾಡುವಂತೆ ವಿನಂತಿಸಿದ್ದಾಳೆ. ಶಿವಕುಮಾರಿ, ಭಾರತೀಯ ಪೌರತ್ವವನ್ನು ಪಡೆಯಲು ಯೋಜಿಸುತ್ತಿದ್ದು ಇದಕ್ಕೆ ಸಂಬಂಧಿತ ಕಾರ್ಯವಿಧಾನ ಮತ್ತು ಮಾನದಂಡಗಳನ್ನು ಸಹ ಅವರಿಗೆ ವಿವರಿಸಲಾಗಿದೆ ಎಂದು ಎಸ್ಪಿ ಸುದ್ದಿಗಾರರಿಗೆ ತಿಳಿಸಿದ್ದಾರೆ.