ITR Filing: ಆದಾಯ ತೆರಿಗೆ ಪಾವತಿಸುವಾಗ ಈ ಅಂಶವನ್ನು ಗಮನದಲ್ಲಿಡಿ! (Read Till End)
ನೀವು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುತ್ತೀರಾ..? ಹಾಗಾದರೆ, ತೆರಿಗೆದಾರರು ತಮ್ಮ ಮಾಹಿತಿಗಳನ್ನು ದಾಖಲಿಸುವಾಗ ಮತ್ತು ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವಾಗ ಈ ಅಂಶವನ್ನು ತಪ್ಪದೆ ಗಮನದಲ್ಲಿಡಬೇಕು.
ಕಳೆದ ಮೂರು ವರ್ಷಗಳಲ್ಲಿ ತೆರಿಗೆದಾರರು ಕಡಿಮೆ ಸಂಬಳದ ಆದಾಯ ತೋರಿಸಿದ್ದೀರಾ..? ಸುಳ್ಳು ಕಡಿತದ ಹಕ್ಕುಗಳೊಂದಿಗೆ ಮರುಪಾವತಿಯನ್ನು ಕ್ಲೇಮ್ ಗೆ ಹಾಕಿದ್ದೀರಾ..? ಹಾಗಾದರೆ, ಈ ವಿಚಾರದಲ್ಲಿ ಸರ್ಕಾರ ಗಂಭೀರವಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
2023-24ರ ಮೌಲ್ಯಮಾಪನ ವರ್ಷಕ್ಕೆ ಎಪ್ರಿಲ್ 1, 2023ರಿಂದ ಆದಾಯ ತೆರಿಗೆ ರಿಟರ್ನ್ಸ್(ITR) ಸಲ್ಲಿಕೆ ಕಾರ್ಯ ಆರಂಭವಾಗಿದೆ. ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
ನಿಮ್ಮ ಆದಾಯ ತೆರಿಗೆ ಮಾಹಿತಿ ಸಲ್ಲಿಸುವಾಗ ನಿಖರವಾದ ಮಾಹಿತಿಯನ್ನು ಒದಗಿಸುವುದು ಬಹಳ ಮುಖ್ಯ. ಕಳೆದ ಮೂರು ವರ್ಷಗಳಲ್ಲಿ ತೆರಿಗೆ ದಾರರು ನೀಡಿದ ದಾಖಲೆಗಳನ್ನು ಈ ಬಾರಿ ಆದಾಯ ತೆರಿಗೆ ಇಲಾಖೆ ಸಮಗ್ರವಾಗಿ ಪರಿಶೀಲನೆ ನಡೆಸಲಿದೆ. ಒಂದು ವೇಳೆ, ಈ ಮಾಹಿತಿ ಅರ್ಧ ಸತ್ಯ ಅಥವಾ ಸುಳ್ಳು ಎಂದು ಕಂಡು ಬಂದರೆ ಕಠಿಣ ಕ್ರಮಕ್ಕೆ ಮುಂದಾಗಲಿದೆ.
ಆದಾಯ ತೆರಿಗೆ ಕಾಯ್ದೆ 1961 ಪ್ರಕಾರ ಆದಾಯದ ಸುಳ್ಳು ವರದಿ ಮತ್ತು ತಪ್ಪು ಕಡಿತದ ಹಕ್ಕು ಪಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಈ ಅಪರಾಧ ಎಸಗಿದರೆ, ವಾರ್ಷಿಕ 12% ಬಡ್ಡಿದರದಲ್ಲಿ ಮತ್ತು ಶೇ. 200% ದಂಡವನ್ನು ಪಾವತಿಸಬೇಕಾಗುತ್ತದೆ. ಜೈಲು ಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಇದೆ.
ತಪ್ಪು ಸರಿಪಡಿಸಲು ಅವಕಾಶ ಇದೆಯೇ..?
ಒಂದು ವೇಳೆ, ಐಟಿಆರ್ ಸಲ್ಲಿಕೆಯ ಮಾಹಿತಿಯಲ್ಲಿ ಕಣ್ತಪ್ಪಿನಿಂದ ಅಥವಾ ದುರುದ್ದೇಶ ರಹಿತ ತಪ್ಪುಗಳನ್ನು ಮಾಡಿದ್ದರೆ ಅದನ್ನು ಸರಿಪರಿಸಲು ಅವಕಾಶ ಇದೆ. 2021-22, 2022-23 ರ ಮೌಲ್ಯಮಾಪನ ವರ್ಷಗಳಿಗೆ ಸೆಕ್ಷನ್ 139(8A) ಅಡಿಯಲ್ಲಿ ನವೀಕರಿಸಿದ ರಿಟರ್ನ್ಸ್ ಸಲ್ಲಿಸಬಹುದು. ಇದರಿಂದಾಗಿ ಫೈಲಿಂಗ್ ನಲ್ಲಿ ಆದ ದೋಷಗಳನ್ನು ಸರಿಪಡಿಸಬಹುದು.ಅಗತ್ಯ ಬಿದ್ದರೆ, ಸೆಕ್ಷನ್ 140(B) ಅಡಿಯಲ್ಲಿ ಸೂಕ್ತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
2023-24ರ ಮೌಲ್ಯಮಾಪನ ವರ್ಷಕ್ಕೆ ಈಗಾಗಲೇ ಮೂಲ ರಿಟರ್ನ್ ಗಳನ್ನು ಸಲ್ಲಿಸಿದ ವ್ಯಕ್ತಿಗಳು ಯಾವುದೇ ಹೊಂದಾಣಿಕೆಗಳು ಅಥವಾ ತಿದ್ದುಪಡಿಗಳನ್ನು ಸಲ್ಲಿಸಬಹುದು. ಅದನ್ನು ಸೆಕ್ಷನ್ 139(5)ರ ಅಡಿಯಲ್ಲಿ ಪರಿಷ್ಕೃತ ರಿಟರ್ನ್ ನೆಲೆಯಲ್ಲಿ ಸಲ್ಲಿಸಬಹುದು.
ವಂಚನೆ ವಿರುದ್ಧ ಕಠಿಣ ಕ್ರಮಗಳು
ಐಟಿಆರ್ ಮಾಹಿತಿ ಸಲ್ಲಿಕೆಯಲ್ಲಿ ವಂಚನೆ ಎಸಗಿದ್ದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ. ಸುಳ್ಳು ಕ್ಲೇಮ್ ಮಾಡುವ ಜನರನ್ನು ಹಿಡಿಯಲು ಬಲೆ ಬೀಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ, ಖಾಸಗಿ ಮತ್ತು ಸಾಫ್ಟ್‌ವೇರ್ ವಲಯಗಳಿಗೆ ಸೇರಿದ ಉದ್ಯೋಗಿಗಳು ಸುಳ್ಳು ಹಕ್ಕುಗಳನ್ನು ನೀಡಿರುವುದನ್ನು ಐಟಿ ಇಲಾಖೆ ವಿಶೇಷ ಸಾಫ್ಟ್‌ವೇರ್ ಮೂಲಕ ಪತ್ತೆ ಹಚ್ಚಲಾಗಿದೆ.
ಆದಾಯ ತೆರಿಗೆ ಫೈಲಿಂಗ್ ಮಾಡುವ ಮುನ್ನ ಎಚ್ಚರಿಕೆ:
ವಿಳಂಬ ಇಲ್ಲದೆ ಸಾಕಷ್ಟು ಎಚ್ಚರಿಕೆಯಿಂದ ಐಟಿ ರಿಟರ್ನ್ ಸಲ್ಲಿಸಿ. ಸಾಕಷ್ಟು ಮುಂಚಿತವಾಗಿ ಸಲ್ಲಿಸುವುದು ಉತ್ತಮ. ವಿವಿಧ ರೀತಿಯ ತೆರಿಗೆದಾರರಿಗೆ ಲಭ್ಯವಿರುವ ವಿವಿಧ ಐಟಿ ಫಾರ್ಮ್‌ಗಳಲ್ಲಿ ಅನ್ವಯವಾಗುವ ಫಾರ್ಮ್‌ನ್ನು ಅರ್ಥ ಮಾಡಿಕೊಂಡು ರಿಟರ್ನ್ಸ್ ಸಲ್ಲಿಸಿ.
ಪರಿಣಾಮಕಾರಿ ತೆರಿಗೆ ಯೋಜನೆಗಾಗಿ ಹೊಸ ಮತ್ತು ಹಳೆಯ ಪದ್ಧತಿಗಳಲ್ಲಿನ ತೆರಿಗೆ ಸ್ಲ್ಯಾಬ್‌ಗಳನ್ನು ಅರ್ಥ ಮಾಡಿಕೊಳ್ಳಿ. ರಿಟರ್ನ್ ಸಲ್ಲಿಸಲು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮ್ 16, ಬ್ಯಾಂಕ್ ಖಾತೆಯ ತಖ್ತೆ(ಸ್ಟೇಟ್‌ಮೆಂಟ್), ಹೂಡಿಕೆ ಪುರಾವೆಗಳು, ಫಾರ್ಮ್ 26 ಎಎಸ್‌ನಂತರ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ...
 
 
 
 
 
 
 
 
 
 
 
 
 
 
 
 
 
 
