ಪಾಕಿಸ್ತಾನಕ್ಕೆ ಹೋಗಿದ್ದ ಭಾರತದ ಅಂಜು ಇನ್ನುಮುಂದೆ ಫಾತಿಮಾ : ಮತಾಂತರವಾಗಿ ನಸ್ರುಲ್ಲಾ ಮದುವೆಯಾದ ಎರಡು ಮಕ್ಕಳ ತಾಯಿ


ನವದೆಹಲಿ: ಫೇಸ್​ಬುಕ್​ ಸ್ನೇಹಿ ನಸ್ರುಲ್ಲಾ ಭೇಟಿಗೆಂದು ಪಾಕಿಸ್ತಾನಕ್ಕೆ ಹೋಗಿದ್ದ ವಿವಾಹಿತೆ, ಎರಡು ಮಕ್ಕಳ ತಾಯಿ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಆತನನ್ನೇ ವಿವಾಹವಾಗಿದ್ದಾಳೆ. ಇನ್ನು ಮುಂದೆ ಆಕೆ ಅಂಜು ಅಲ್ಲ. ಆಕೆ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಿದ್ದಾಳೆ.

ಭಾರತದ 34 ವರ್ಷದ ಅಂಜು ಫೇಸ್​ಬುಕ್​ನಲ್ಲಿ ಪರಿಚಿತನಾಗಿದ್ದ ಸ್ನೇಹಿತ 29 ವರ್ಷದ ನಸ್ರುಲ್ಲಾನನ್ನು ಭೇಟಿಯಾಗಲೆಂದು ಪಾಕಿಸ್ತಾನಕ್ಕೆ ತೆರಳಿದ್ದಳು. ಒಂದು ತಿಂಗಳಮಟ್ಟಿಗೆ ಸ್ನೇಹಿತನನ್ನು ನೋಡಲು ಹೋಗಿದ್ದೇನೆ. ನಮಗೆ ಮದುವೆಯಾಗುವ ಉದ್ದೇಶವಿಲ್ಲ ಎಂದು ಅವರಿಬ್ಬರು ಹೇಳಿದ್ದು ಸುದ್ದಿಯಾಗಿತ್ತು. ಆದರೆ ಕ್ರೈಸ್ತ ಧರ್ಮೀಯಳಾದ ಈಕೆ ಮತಾಂತರಗೊಂಡು ಫಾತಿಮಾ ಆಗಿ ಇಂದು ನಸ್ರುಲ್ಲಾನನ್ನೇ ಮದುವೆಯಾಗಿದ್ದಾಳೆ. ಸದ್ಯದಲ್ಲೇ ಇಬ್ಬರೂ ಭಾರತಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ.

ಅಂಜು ಉತ್ತರಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದ್ದು, ರಾಜಸ್ತಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲಾ 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾಗಿದ್ದರು. ಈ ಪರಿಚಯ ಇಬ್ಬರ ನಡುವೆ ಪ್ರೀತಿಗೆ ತಿರುಗಿತ್ತು. ಇತ್ತೀಚೆಗೆ ಅಂಜು ಗೆಳೆಯ ನಸ್ರುಲ್ಲಾನನ್ನು ಭೇಟಿಯಾಗಲು ಅಧಿಕೃತ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿದ್ದಳು. ಇಬ್ಬರಿಗೂ ಮದುವೆಯಾಗುವ ಉದ್ದೇಶವಿಲ್ಲ ಎಂದು ಈ ಮೊದಲು ಹೇಳಲಾಗಿತ್ತಾದರೂ ಈಗ ಇಬ್ಬರೂ ಮದುವೆಯಾಗಿದ್ದಾರೆ.

ಅಂಜು ಇಸ್ಲಾಮ್​ಗೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡು ನಸ್ರುಲ್ಲಾನನ್ನು ಮದುವೆ ಆಗಿರುವುದಾಗಿ ಪಾಕಿಸ್ತಾನದ ದೀರ್​ನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಂಜುಗೆ ಅರವಿಂದ ಎಂಬಾತನೊಂದಿಗೆ ಈ ಮೊದಲೇ ವಿವಾಹವಾಗಿತ್ತು. ಈ ದಂಪತಿಗೆ 15 ವರ್ಷದ ಪುತ್ರಿ ಹಾಗೂ 6 ವರ್ಷದ ಪುತ್ರನಿದ್ದಾನೆ. ಜೈಪುರಕ್ಕೆ ಹೋಗಿ ಬರುವುದಾಗಿ ಪತಿ ಬಳಿ ಹೇಳಿ ಹೊರಟಿದ್ದ ಅಂಜು, ಬಳಿಕ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಳು ಎಂದು ಆ ಬಳಿಕ ತಿಳಿದು ಬಂದಿತ್ತು.