ಫೇಸ್ಬುಕ್ ಪ್ರಿಯತಮನಿಗಾಗಿ ಪಾಕ್ ಗೆ ಹೋದ ಅಂಜು: ವಿಲಕ್ಷಣ ವರ್ತನೆಯಿಂದ ಆಕೆಯನ್ನು 20ವರ್ಷಗಳಿಂದ ತೊರೆದಿದ್ದೇನೆ ಎಂದ ತಂದೆ


ನವದೆಹಲಿ: ಪಬ್​ಜಿ ಪ್ರಿಯಕರನಿ​ಗಾಗಿ ಪಾಕಿಸ್ತಾನದಿಂದ ಸೀಮಾ ಹೈದರ್​ ಎಂಬಾಕೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿರುವ ಘಟನೆ ಇಡೀ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಬೆನ್ನ ಲ್ಲೇ ಭಾರತ ಮೂಲದ ಮಹಿಳೆಯೊಬ್ಬಳು ತನ್ನ ಫೇಸ್​ಬುಕ್​ ಪ್ರಿಯಕರನನ್ನು ಭೇಟಿಯಾಗಲು ಅಧಿಕೃತ ವೀಸಾದೊಂದಿಗೆ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಕುಗ್ರಾಮಕ್ಕೆ ತೆರಳಿದ್ದಾಳೆ. ಆಕೆಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಇದೀಗ ಆಕೆ ತನ್ನ ಮಕ್ಕಳನ್ನು ತೊರೆದು ಪಾಕ್ ಗೆ ಹೋಗಿದ್ದಾಳೆ.

ಉತ್ತರ ಪ್ರದೇಶದ ಕೈಲೋರ್​ ಗ್ರಾಮ ಮೂಲದ ಸದ್ಯ ರಾಜಸ್ಥಾನದ ಅಲ್ವಾರ್​ ನಿವಾಸಿ ಅಂಜು (34) ಪಾಕಿಸ್ತಾನಕ್ಕೆ ತೆರಳಿರುವ ಮಹಿಳೆ. 

ಅಂಜು ಹಾಗೂ ಪಾಕಿಸ್ತಾನದ ನಸ್ರುಲ್ಲಾ (29) 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾಗಿದ್ದಾರೆ. ಪರಿಚಯ ಪ್ರೀತಿಗೆ ತಿರುಗಿ, ಇದೀಗ ಅಂಜು ಪ್ರಿಯಕರನನ್ನು ಭೇಟಿಯಾಗಲು ಪಾಕ್​ಗೆ ಹೋಗಿದ್ದಾಳೆ. ನಸ್ರುಲ್ಲಾನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಅಂಜು ತಂದೆ ಗಯಾ ಪ್ರಸಾದ್ ಥಾಮಸ್, ಅಂಜು ಪಾಕಿಸ್ತಾನದಲ್ಲಿ ಇರುವ ಸಂಗತಿ ನನಗೆ ನಿನ್ನೆಯಷ್ಟೇ ತಿಳಿಯಿತು. ತನ್ನ ಪುತ್ರ ಈ ವಿಚಾರವನ್ನು ಹೇಳಿದ್ದಾನೆ. ಆದರೆ, ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಆಕೆ ಮದುವೆಯಾಗಿ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿರುವ ಭಿವಾಡಿಗೆ ಸ್ಥಳಾಂತರವಾದ ಬಳಿಕ ಸುಮಾರು 20 ವರ್ಷಗಳಿಂದ ನಾನು ಆಕೆಯ ಸಂಪರ್ಕದಲ್ಲಿಲ್ಲ ಎಂದು ತಿಳಿಸಿದ್ದಾರೆ.

ಆಕೆ ಮಾನಸಿಕ ಅಸ್ವಸ್ಥೆ. ಆದ್ದರಿಂದ ನಾವೆಂದೂ ಆಕೆಯನ್ನು ಮನೆಗೆ ಆಹ್ವಾನಿಸಿರಲಿಲ್ಲ. ನನ್ನ ಅಳಿಯ ಬಹಳ ಸರಳ ವ್ಯಕ್ತಿ. ನನ್ನ ಪುತ್ರಿ ವಿಚಿತ್ರ ಸ್ವಭಾವದವಳು. ಆದರೆ, ಆಕೆ ತನ್ನ ಸ್ನೇಹಿತನೊಂದಿಗೆ ಯಾವುದೇ ಸಂಬಂಧವನ್ನು ಆಕೆ ಹೊಂದಿಲ್ಲ. ಅವಳು ಸ್ವತಂತ್ರ ಸ್ವಭಾವದವಳು, ಆದರೆ ಅವಳು ಎಂದಿಗೂ ಈ ರೀತಿಯ ಪ್ರಯತ್ನ ಮಾಡುವುದಿಲ್ಲ ಎಂಬುದನ್ನು ನಾನು ಖಾತರಿಪಡಿಸಬಲ್ಲೆ. ಆಕೆ 12ನೇ ತರಗತಿಯವರೆಗೆ ಓದಿದ್ದಾಳೆ ಮತ್ತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪುತ್ರಿಯ ವಿಲಕ್ಷಣ ಸ್ವಭಾವದಿಂದಾಗಿ ನಾನು ಅವಳನ್ನು ತೊರೆದಿದ್ದೇನೆ ಎಂದು ಥಾಮಸ್​ ಹೇಳಿದರು.

ಅಂದಹಾಗೆ ಗಯಾ ಪ್ರಸಾದ್ ಥಾಮಸ್​ ಮಧ್ಯಪ್ರದೇಶದ ಗ್ವಾಲಿಯರ್​ ಜಿಲ್ಲೆಯ ತೆಂಕನಾಪುರ್​ ಪಟ್ಟಣದ ಬೌನಾ ಗ್ರಾಮದಲ್ಲಿ ವಾಸವಿದ್ದಾರೆ. ಅಂಜು 3ನೇ ವಯಸ್ಸಿನಿಂದಲೇ ಉತ್ತರಪ್ರದೇಶದ ಜಲೌನ್​ ಜಿಲ್ಲೆಯ ಆಕೆಯ ಚಿಕ್ಕಪ್ಪನ ಮನೆಯಲ್ಲಿ ವಾಸವಿದ್ದಾಳೆ. ಆಕೆ ಹುಟ್ಟಿದ್ದು ಕೂಡ ಅಲ್ಲಿಯೇ. ಮದುವೆಯೂ ಅಲ್ಲಿಯೇ ನಡೆದಿದೆ. ಆದರೆ ಆಕೆ ಯಾರಿಗೂ ಮಾಹಿತಿ ನೀಡದೆ ಪಾಕಿಸ್ತಾನಕ್ಕೆ ಹೋಗಿದ್ದು ತಪ್ಪು. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಆ ಮಕ್ಕಳು ಈಗ ಅವರ ತಂದೆಯೊಂದಿಗಿದ್ದಾರೆ. ಆಕೆ ಯಾವಾಗ ಪಾಕಿಸ್ತಾನಕ್ಕೆ ಹೋಗಿದ್ದಾಳೆಂಬುದು ನಮಗೆ ಗೊತ್ತಿಲ್ಲ ಎಂದು ಅವದು ಹೇಳಿದ್ದಾರೆ.