ಸತ್ನಾ (ಮಧ್ಯಪ್ರದೇಶ): ಸತ್ನಾ ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಇದು ಕಳೆದ ನಾಲ್ಕು ದಿನಗಳಲ್ಲಿ ನಡೆದ ಎರಡನೇ ಅತ್ಯಾಚಾರ ಪ್ರಕರಣವಾಗಿದೆ. ಶುಕ್ರವಾರ ಮಧ್ಯಾಹ್ನ ಬಾಲಕಿ ಬಹಿರ್ದೆಸೆಗೆ ತೆರಳಿದ್ದಾಗ ಅತ್ಯಾಚಾರ ನಡೆದಿದ್ದು, ಘಟನೆಯ ಕುರಿತು ಬಾಲಕಿಯ ಕುಟುಂಬದ ಸದಸ್ಯರು ರಾಮ್‌ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆರೋಪಿ ವಿಜಯ್ ಸಾಕೇತ್‌ನನ್ನು ಶನಿವಾರ ಬಂಧಿಸಲಾಗಿದೆ.
ಸತ್ನಾ ಜಿಲ್ಲೆಯ ಮೈಹರ್ ಪಟ್ಟಣದ ಪ್ರಸಿದ್ಧ ದೇವಸ್ಥಾನವೊಂದರ ಟ್ರಸ್ಟ್‌ನ ಇಬ್ಬರು ನೌಕರರು ಗುರುವಾರ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದರು. ಬಳಿಕ ಬಾಲಕಿಯನ್ನು ಹೀನಾಯವಾಗಿ ಥಳಿಸಿದ್ದರು.
ಆರೋಪಿಗಳಾದ ರವೀಂದ್ರ ಕುಮಾರ್ ಮತ್ತು ಅತುಲ್ ಬಂದೋಪಾಧ್ಯಾಯ ಅವರನ್ನು ಬಂಧಿಸಲಾಗಿತ್ತು. ಘಟನೆಯ ಬಳಿಕ ಸ್ಥಳೀಯ ಆಡಳಿತವು ಆರೋಪಿಗಳ ಮನೆಗಳನ್ನು ಕೆಡವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.