ಆನ್‌ಲೈನ್ ಗೇಮ್ ಮೂಲಕ‌ ಬಾಲಕಿಯ ಸ್ನೇಹ ಬೆಳೆಸಿದ ಅಪಹರಣಗೆತ್ನಿಸಿದ ಕಾಮುಕರು ಅರೆಸ್ಟ್

ಅಹ್ಮದ್‌ನಗರ: ಆನ್‌ಲೈನ್ ಗೇಮ್ ಪಬ್‌ಜಿ ಮೂಲಕ ಅಪ್ರಾಪ್ತ ಬಾಲಕಿಯ ಸ್ನೇಹ ಗಳಿಸಿ ಆಕೆಯ ಅಪಹರಣಕ್ಕೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ನಡೆದಿದೆ. ಇದೀಗ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಿಹಾರ ಮೂಲದ ಅಕ್ರಮ್ ಶೇಖ್ ಮತ್ತು ನೆಮತುಲ್ಲಾ ಎಂಬವರು ಆರೋಪಿಗಳು. ಇವರು ಬಿಹಾರದಿಂದ ಮಹಾರಾಷ್ಟ್ರಕ್ಕೆ ಬಂದು ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದಾರೆ. ಸದ್ಯ ಇವರನ್ನು ಸಂಗಮನೇರ್ ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯನ್ನು ಆರೋಪಿಗಳಾದ ಅಕ್ರಮ್ ಶೇಖ್ ಹಾಗೂ ನೆಮತುಲ್ಲಾ ಪಬ್‌ಜಿ ಗೇಮ್ ಮೂಲಕ ಪರಿಚಯ ಮಾಡಿಕೊಂಡಿದ್ದರು. ಆ ಬಳಿಕ ಆಕೆಯ ನಂಬರ್‌ ಪಡೆದು ಚಾಟಿಂಗ್ ಆರಂಭಿಸುತ್ತಾರೆ. ನಿಧಾನವಾಗಿ ಆಕೆಯ ಸ್ನೇಹವನ್ನು ಬೆಳೆಸಿದ್ದ ಆರೋಪಿಗಳು ಬಾಲಕಿಯನ್ನು ಭೇಟಿಯಾಗಲು ಬಿಹಾರದಿಂದ ಮಹಾರಾಷ್ಟ್ರದ ಸಂಗಮನೇ‌ರ್ ನಗರಕ್ಕೆ ಬಂದು ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದರು. ಬಳಿಕ ಆರೋಪಿಗಳು ಬಾಲಕಿಯನ್ನು ಭೇಟಿಯಾಗಲು ಹೋಟೆಲ್ ರೂಂಗೆ ಕರೆದಿದ್ದಾರೆ.

ಆದರೆ ಬಾಲಕಿ ಹೋಟೆಲ್ ರೂಂಗೆ ಹೋಗಲು ನಿರಾಕರಿಸಿದ್ದಾಳೆ. ಕೊನೆಗೆ ರಸ್ತೆಯಲ್ಲೇ ಬಾಲಕಿಯನ್ನು ಆರೋಪಿಗಳು ಭೇಟಿಯಾಗಿದ್ದಾರೆ. ಅಲ್ಲಿಂದ ನಿರ್ಜನ ಸ್ಥಳಕ್ಕೆ ಆಕೆಯನ್ನು ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಆರೋಪಿಗಳ ಪೈಕಿ ಅಕ್ರಮ್ ಬಾಲಕಿಯನ್ನು ಮದುವೆಯಾಗುವ ಬಗ್ಗೆ ಮಾತನಾಡಿದ್ದಾನೆ. ಆದರೆ, ಆಕೆ ನಿರಾಕರಿಸುತ್ತಾಳೆ.

ಆಕೆಯ ನಿರಾಕರಿಸಿದ್ದು ನೋಡಿ ಆರೋಪಿಗಳು ಬಾಲಕಿಯನ್ನು ಬಲವಂತವಾಗಿ ಬಿಹಾರಕ್ಕೆ ಕರೆದೊಯ್ಯಲು ಯತ್ನಿಸಿದ್ದಾರೆ. ಇದರಿಂದ ಬೆದರಿದ ಬಾಲಕಿ ಕಿರುಚಾಡಿದ್ದಾಳೆ. ಇದನ್ನು ಗಮನಿಸಿದ ದಾರಿಹೋಕರು ಸೇರಿಕೊಂಡು ಬಾಲಕಿಗೆ ಸಹಾಯ ಮಾಡಿದ್ದಾರೆ. ಕೊನೆಗೆ ಆರೋಪಿಗಳನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯ ದೂರಿನ ನಂತರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.