ಆಟವಾಡುತ್ತಿರುವಾಗ 300 ಅಡಿ ಆಳದ ಬಾವಿಗೆ ಬಿದ್ದ ಮಗು: ಭರದಿಂದ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆ


ಮುಗವಲಿ: ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವೊಂದು 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿರುವ ದಾರುಣ ಘಟನೆಯೊಂದು ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಮುಂಗೋಲಿ ಗ್ರಾಮದಲ್ಲಿ ನಡೆದಿದೆ.

ಮಗುವನ್ನು ರಕ್ಷಿಸಲು ಪೊಲೀಸ್ ಪಡೆ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆ‌ಎಫ್ ಸ್ಥಳಕ್ಕೆ ಆಗಮಿಸಿದ್ದು, ಹಿರಿಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ. ಜೆಸಿಬಿಯ ನೆರವಿನಿಂದ 300 ಅಡಿ ಆಳದ ಬಾವಿಯಿಂದ ಮಗುವನ್ನು ಹೊರತರುವ ಕಾರ್ಯ ಭರದಿಂದ ಸಾಗಿದೆ. ರಕ್ಷಣಾ ಕಾರ್ಯಕ್ಕೆ ಅನುಕೂಲವಾಗುವಂತೆ ಬೋರ್‌ವೆಲ್ ಪಕ್ಕದಲ್ಲಿ ಕಂದಕ ತೆಗೆಯಲಾಗುತ್ತಿದೆ. ಘಟನೆ ಸಂಭವಿಸಿ 12 ಗಂಟೆಗಳಿಗಿಂತ ಅಧಿಕ ಸಮಯ ಕಳೆದಿದೆ. ಆದ್ದರಿಂದ ಮಗುವಿನ ನಿಖರ ಚಲವಲನವನ್ನು ಸ್ಪಷ್ಟವಾಗಿ ಗಮನಿಸಲು ಸಾಧ್ಯವಾಗುತ್ತಿಲ್ಲ.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಹೆಣ್ಣು ಮಗು 50 ಅಡಿಗಿಂತ ಹೆಚ್ಚು ಕೆಳಗೆ ಜಾರಿದೆ. ನಾವು ಮಗುವಿಗೆ ಆಮ್ಲಜನಕ ಒದಗಿಸುತ್ತಿದ್ದೇವೆ. ಕಲ್ಲು ಬಂಡೆಗಳು ಅಡ್ಡ ಬಂದಿರುವ ಕಾರಣ ಕಾರ್ಯಾಚಾರಣೆಗೆ ತೊಂದರೆಯಾಗುತ್ತಿದೆ ಎಂದರು.