ಮಂಗಳೂರು: ಅಪ್ರಾಪ್ತ ಮಲಪುತ್ರಿಯ ಅತ್ಯಾಚಾರಗೈದ ತಂದೆಗೆ 20ವರ್ಷ ಕಾರಾಗೃಹ ಶಿಕ್ಷೆ


ಮಂಗಳೂರು: ಅಪ್ರಾಪ್ತ ಮಲಪುತ್ರಿಯ ಮೇಲೆಯೇ  ಅತ್ಯಾಚಾರ ಎಸಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೊಕ್ಸೊ ನ್ಯಾಯಾಲಯವು ಆರೋಪಿ ತಂದೆಗೆ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ಮಲ್ಲಿಕಾ ಎಂಬವರು ಆರೋಪಿ ಅಶ್ವತ್ಥ್ ನನ್ನು ಎರಡನೇ ವಿವಾಹವಾಗಿದ್ದರು. ಆಕೆ ಎರಡನೇ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ 2022ರ ಜುಲೈ 26 ನಸುಕಿನ ವೇಳೆ 3.30ಗಂಟೆಗೆ ಅಶ್ವತ್ಥ್ ಪತ್ನಿಯ ಮೊದಲನೆಯ ಪತಿಯ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ಯಾರಲ್ಲಾದರೂ ತಿಳಿಸಿದರೆ ಬಾಲಕಿಯನ್ನು ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದ್ದ. ಆದರೆ ಸಂತ್ರಸ್ತ ಬಾಲಕಿ ಈ ವಿಚಾರವನ್ನು ತನ್ನ ದೊಡ್ಡಮ್ಮನಲ್ಲಿ ತಿಳಿಸಿದ್ದಳು. ಅವರು ತಕ್ಷಣ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಎಫ್ಎಸ್ಎಲ್ ವರದಿಯನ್ವಯ ಆರೋಪಿ ಅಶ್ವತ್ಥ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ವಿಶೇಷ ಪೊಕ್ಸೊ ನ್ಯಾಯಾಲಯ ಆರೋಪಿ ಅಶ್ವತ್ಥ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
BREAKING NEWS
Loading latest news...
Join our WhatsApp Channel Powered By : Online Pudu