ಅಗರ್ತಲ: ರಥಯಾತ್ರೆಯ ವೇಳೆ ಹೈವೋಲ್ಟೇಜ್ ವಿದ್ಯುತ್ ತಂತಿಗೆ ರಥದ ತುದಿ ಸ್ಪರ್ಶಿಸಿ ನಡೆದ ಆಘಾತದಿಂದ ಮಕ್ಕಳಿಬ್ಬರು ಸೇರಿದಂತೆ ಒಟ್ಟು 7ಮಂದಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. 
ಪೊಲೀಸರ ಪ್ರಕಾರ ಈ ಘಟನೆ “ಉಲ್ಲೋ ರಥ” ಹೆಸರಿನ ಮೆರವಣಿಗೆ ವೇಳೆ ನಡೆದಿದೆ. ವಾರ್ಷಿಕ ರಥಯಾತ್ರೆಯ ಉತ್ಸವದ ಬಳಿಕ ಜಗನ್ನಾಥ ಮತ್ತು ಬಲರಾಮ, ಸುಭದ್ರಾ ಜತೆ ಹಿಂದಿರುಗುವ ಪ್ರಯಾಣದ ಸಂಕೇತವಾಗಿ ಉಲ್ಲೋ ರಥಯಾತ್ರೆ ನಡೆಸಲಾಗುತ್ತದೆ. ಕಬ್ಬಿಣದಿಂದ ತಯಾರಿಸಲಾಗಿದ್ದ ರಥವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಹೈವೋಲ್ಟೇಜ್ ಸಂಪರ್ಕಕ್ಕೆ ರಥ ಬಂದಾಗ ವಿದ್ಯುತ್ ತಂತಿಗೆ ತಗುಲಿ, ಸ್ಥಳದಲ್ಲಿಯೇ 6 ಮಂದಿ ಮೃತಪಟ್ಟಿದ್ದಾರೆ. ಮತ್ತೋರ್ವನು ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಅಸುನೀಗಿದ್ದಾನೆ.
16ಕ್ಕೂ ಅಧಿಕ ಮಂದಿ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಥವು ವಿದ್ಯುತ್ ಸಂಪರ್ಕಕ್ಕೆ ಹೇಗೆ ಬಂತು ಎಂಬುದನ್ನು ಕಂಡುಕೊಳ್ಳಲು ತನಿಖಾಧಿಕಾರಿಗಳು ಪ್ರಯತ್ನಿಸಿದ್ದಾರೆ.
ಪ್ರಧಾನಿ ಮೋದಿಯವರು ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ ಮತ್ತು ಗಾಯಗೊಂಡಿರುವವರ ಚೇತರಿಕೆಗಾಗಿ ಚಿಕಿತ್ಸೆಗೆಂದು 50 ಸಾವಿರ ರೂ. ನೆರವು ಘೋಷಣೆ ಮಾಡಿದ್ದಾರೆ.
ದುರಂತದಲ್ಲಿ ಭಾಗಿಯಾಗಿರುವ ಗಾಯಾಳುಗಳನ್ನು ಭೇಟಿ ಮಾಡಲು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ರೈಲಿನಲ್ಲಿ ಕುಮಾರ್‌ಘಾಟ್‌ಗೆ ತೆರಳಿದ್ದಾರೆ.
 
   
 
 
 
 
 
 
 
 
 
 
 
 
 
 
 
 
 
 
