ಪ್ರಯಾಗ್‌ರಾಜ್: ಪ್ರೇಯಸಿಯನ್ನೇ ಹತ್ಯೆ ಮಾಡಿ ಆಕೆಯ ಮೃತದೇಹವನ್ನು ತನ್ನ ನಿರ್ಮಾಣ ಹಂತದ ಮನೆಯ ಟ್ಯಾಂಕ್‌ನಲ್ಲಿ ಬಚ್ಚಿಟ್ಟ ಆರೋಪದಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ ಕೇಸರ್(35) ಮೃತ ದುರ್ದೈವಿ ಮಹಿಳೆ. ಆಕೆಯ ಮೃತದೇಹವನ್ನು ನೀರಿನ ಟ್ಯಾಂಕ್‌ನಿಂದ ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಮುನಾಪುರ ಕರ್ಛಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಮಹೇವಾ ನಿವಾಸಿ ಅರವಿಂದ್ ನ ಮನೆಯಲ್ಲಿಯೇ ರಾಜ್ ಕೇಸರ್ ಮೃತದೇಹ ಪತ್ತೆಯಾಗಿದೆ. ರಾಜ್ ಕೇಸರ್‌ಳನ್ನು ಸುಮಾರು 14 ದಿನಗಳ ಹಿಂದೆ ಕೊಲೆಗೈದ ಅರವಿಂದ್, ತನ್ನ ನಿರ್ಮಾಣ ಹಂತದ ಮನೆಯ ಟ್ಯಾಂಕ್ ಒಳಗೆ ಅಡಗಿಸಿಟ್ಟಿದ್ದ. ಪುತ್ರಿ ಎಲ್ಲಿಯೂ ಕಾಣುತ್ತಿಲ್ಲವೆಂದು ಮೇ 30ರಂದು ರಾಜ್ ಕೇಸರ್ ಕುಟುಂಬ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದರು.
ಪೊಲೀಸರು ಮೃತ ರಾಜ್ ಕೇಸರ್ ನ ಫೋನ್ ಸಂಭಾಷಣೆಗಳ ಆಧಾರದಲ್ಲಿ ಅರವಿಂದನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಪ್ರಕರಣ ಬಯಲಾಗಿದೆ. ಮೃತ ಮಹಿಳೆಯ ಕಳುಹಿಸಲಾಗಿದೆ. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.