ಬೈಕ್ ರೈಡಿಂಗ್ ವೇಳೆ ಅಭಿಮಾನಿಯ ಪ್ರಾಣ ಉಳಿಸಿದ ನಟ ಅಜಿತ್ - ವೀಡಿಯೋ ವೈರಲ್
Saturday, May 6, 2023
ಚೆನ್ನೈ: ತಮಿಳುನಾಡಿನ ಸ್ಟಾರ್ ನಟ ಅಜಿತ್‌ಗೆ ಬೈಕ್ ಕ್ರೇಜ್ ಭಾರೀ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ತಮ್ಮ ವಾಲಿಮೈ ಸಿನಿಮಾ ಬಳಿಕ ಬೈಕ್‌ನಲ್ಲೇ ಯೂರೋಪ್ ಪ್ರವಾಸ ಮಾಡಿದ್ದರು. ಇದೀಗ ಭಾರತ ಹಾಗೂ ನೇಪಾಳದಲ್ಲಿ ಅಜಿತ್ ಬೈಕ್ ಪ್ರವಾಸ ಮಾಡಿದ್ದಾರೆ.
ಇತ್ತೀಚಿಗೆ ಅಜಿತ್ ವಿಡಿಯೋವೊಂದು ವೈರಲ್ ಆಗಿದ್ದು, ಅವರು ತಮ್ಮ ಅಭಿಮಾನಿಯೊಬ್ಬರ ಪ್ರಾಣವನ್ನು ಉಳಿಸಿರುವಂತೆ ತೋರುತ್ತದೆ. ಬೈಕ್‌ನಲ್ಲಿ ಓವರ್‌ಟೇಕ್ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ ಅಭಿಮಾನಿಯನ್ನು ಅಜಿತ್ ತಮ್ಮ ಸಮಯಪ್ರಜ್ಞೆಯಿಂದ ಕಾಪಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿವೆ.
ಅಜಿತ್ ಅವರು ಕೊನೆಯದಾಗಿ ಎಚ್. ವಿನೋದ್ ನಿರ್ದೇಶನದ ತುನಿವು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದರೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನ ಅಜಿತ್ ತಮ್ಮ ಮೋಟಾರ್ ಸೈಕಲ್‌ನಲ್ಲಿ ಜಗತ್ತನ್ನು ಸುತ್ತುತ್ತಿದ್ದರು. ಅವರು ಯುರೋಪ್ ಮತ್ತು ಭಾರತವನ್ನು ಪ್ರವಾಸ ಮಾಡಿದ್ದರು. ತುನಿವು ಚಿತ್ರೀಕರಣದ ಸಮಯದಲ್ಲಿ ಥೈಲ್ಯಾಂಡ್ ಅನ್ನು ಸಹ ಕವರ್ ಮಾಡಿದ್ದರು. 2022ರ ಜೂನ್ ತಿಂಗಳಲ್ಲಿ ತುನಿವು ಚಿತ್ರೀಕರಣದ ಎರಡನೇ ಶೆಡ್ಯೂಲ್ ಅನ್ನು ಪೂರ್ಣಗೊಳಿಸಿದ ನಂತರ, ಅಜಿತ್ ಯುರೋಪ್‌ಗೆ ರಸ್ತೆ ಪ್ರವಾಸವನ್ನು ಕೈಗೊಂಡರು.
2021ರ ಅಕ್ಟೋಬರ್‌ನಲ್ಲಿ ಅಜಿತ್, ಉತ್ತರ ಭಾರತದ ಬೈಕ್ ರೈಡಿಂಗ್ ಪ್ರವಾಸವನ್ನು ಕೈಗೊಂಡರು. ದೆಹಲಿ ಮತ್ತು ಅಮೃತಸರಕ್ಕೆ ಭೇಟಿ ನೀಡಿದರು. ಅಜಿತ್ ಅವರು ಭಾರತೀಯ ಸೇನೆಯ ಸೈನಿಕರೊಂದಿಗೆ ಬೈಕ್ ಸಮೇತ ತೆಗೆಸಿಕೊಂಡಿರುವ ಫೋಟೋಗಳ ಸರಣಿಯನ್ನು ನಿರ್ಮಾಪಕ ಬೋನಿ ಕಪೂರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಜಿತ್ ಅವರು ವಾಘಾ ಗಡಿಗೆ ಭೇಟಿ ನೀಡಿದ್ದರು. ದೆಹಲಿಯಲ್ಲಿ ವಿಶ್ವಪ್ರಸಿದ್ಧ ಮಹಿಳಾ ಬೈಕರ್ ಮಾರಲ್ ಯಾಜರ್ಲೂ ಅವರನ್ನು ಭೇಟಿಯಾದರು. ಇಬ್ಬರು ಬೈಕ್ ಸವಾರರು ತಮ್ಮ ಬೈಕಿಂಗ್ ಅನುಭವವನ್ನು ಹಂಚಿಕೊಂಡರು. 2021ರ ಸೆಪ್ಟೆಂಬರ್ ತಿಂಗಳಲ್ಲಿ ವಲಿಮೈ ಸಿನಿಮಾ ಚಿತ್ರೀಕರಣ ಮುಗಿಸಿದ ನಂತರ ಅಜಿತ್ ರಷ್ಯಾದಲ್ಲಿ ಬೈಕ್ ಪ್ರವಾಸ ಕೈಗೊಂಡರು. ರಷ್ಯಾದಲ್ಲಿ ತನ್ನ ಬೈಕ್ ಟ್ರಿಪ್ ಅನ್ನು ಆನಂದಿಸುತ್ತಿರುವ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದವು.
ಇತ್ತೀಚೆಗೆ ಅಜಿತ್ ತಮ್ಮ ಬೈಕ್‌ನಲ್ಲಿ ಪ್ರವಾಸ ಮಾಡಿದ್ದರು. ಪ್ರವಾಸದ ನಡುವೆ ಅಭಿಮಾನಿಗಳೊಂದಿಗೆ ಅಜಿತ್ ಪೋಸ್ ನೀಡುತ್ತಿದ್ದಾರೆ. ಅಲ್ಲಿ ತಮ್ಮ ಸಮಯವನ್ನು ಆನಂದಿಸುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಯೊಬ್ಬರ ಪ್ರಾಣ ಉಳಿಸಿರುವ ವಿಡಿಯೋ ವೈರಲ್ ಆಗಿದೆ.
ನೇಪಾಳದಲ್ಲಿ ಸಂಚರಿಸುವಾಗ ಅಜಿತ್ ಅವರನ್ನು ನೋಡಿದ ಅಭಿಮಾನಿಯೊಬ್ಬ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ತನ್ನ ಬೈಕ್ ನಲ್ಲಿ ಹಿಂಬಾಲಿಸಿ ಓವರ್‌ಟೇಕ್ ಮಾಡಲು ಯತ್ನಿಸುತ್ತಾನೆ. ಈ ವೇಳೆ ಎದುರುಗಡೆಯಿಂದ ಲಾರಿಯೊಂದ ಬರುತ್ತದೆ. ಇದನ್ನು ಗಮನಿಸಿದ ಅಜಿತ್, ತಮ್ಮ ಕೈ ಮೂಲಕ ಸನ್ನೆ ಮಾಡಿ ಓವರ್‌ಟೇಕ್ ಮಾಡದಂತೆ ಸೂಚನೆ ನೀಡುತ್ತಾರೆ. ಬಳಿಕ ಅಭಿಮಾನಿ ಬೈಕ್ ವೇಗವನ್ನು ಕಡಿಮೆ ಮಾಡುತ್ತಾನೆ. ಅಲ್ಲದೆ, ಅಜಿತ್ ಅಭಿಮಾನಿಯೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದು ಬರುತ್ತಿವೆ.