ಅಂತರ್ ಜಾತಿ ವಿವಾಹವಾದ ಸಹೋದರನ ಪುತ್ರಿಯ ಕೊಚ್ಚಿ ಕೊಲೆಗೈದ ಚಿಕ್ಕಪ್ಪ


ಲಖನೌ: ಅಂತರ್‌ಜಾತಿ ವಿವಾಹವಾದ ಸಹೋದರ ಪುತ್ರಿಯನ್ನು ಚಿಕ್ಕಪ್ಪನೇ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಸೀತಾಪುರ್ ಜಿಲ್ಲೆಯ ಭಜ್‌ನಗರ ಎಂಬ ಪ್ರದೇಶದಲ್ಲಿ ನಡೆದಿದೆ.

20ವರ್ಷದ ಮೃತ ಯುವತಿಯು ಭಜ್‌ನಗರ ಗ್ರಾಮದ ಯುವಕ ರೂಪ್ ಚಂದ್ ಮೌರ್ಯ ಎಂಬವನನ್ನು ಪ್ರೀತಿಸಿ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದಾಳೆ. ಆದರೆ ಸಹೋದರನ ಪುತ್ರಿ ಬೇರೆ ಜಾತಿಯ ಯುವಕನ್ನು ಪ್ರೀತಿಸಿ ಮದುವೆಯಾಗಿರುವ ಬಗ್ಗೆ ಕೋಪಗೊಂಡ ಆಕೆಯ ಚಿಕ್ಕಪ್ಪ ಅವಳನ್ನು ಕೊಲ್ಲಲು ಸಂಚು ರೂಪಿಸಿದ್ದಾನೆ.

ಯುವತಿ ತನ್ನ ಪತಿಯೊಂದಿಗೆ ಗ್ರಾಮಕ್ಕೆ ವಾಪಸ್ಸಾದ ವಿಚಾರ ತಿಳಿದ ಚಿಕ್ಕಪ್ಪ ಆಕೆ ಒಬ್ಬಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ ಎಂದು ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಕೊಲೆಯ ಬಳಿಕ ಆರೋಪಿ ಪೊಲೀಸ್ ಠಾಣೆಗೆ ಹತ್ಯೆಗೆ ಬಳಸಿದ್ದ ಚಾಕುವಿನ ಸಮೇತ ಶರಣಾಗಿದ್ದಾನೆ. ಸಹೋದರನ ಪುತ್ರಿ ಬೇರೆ ಜಾತಿಯ ಹುಡುಗನೊಂದಿಗೆ ಮದುವೆ ಮಾಡಿಕೊಂಡ ಕಾರಣ ಈ ರೀತಿ ಮಾಡಬೇಕಾಯಿತು ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.